ಹಾಸನ: ದೇವಸ್ಥಾನದಲ್ಲಿ ಕಳವು ಮಾಡುತ್ತಿದ್ದ ಆರೋಪಿ ಬಂಧಿಸುವಲ್ಲಿ ಶಾಂತಿಗ್ರಾಮ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಗಸ್ಟ್ 8 ರಂದು ಹಾಸನ ಜಿಲ್ಲೆಯ ಶಾಂತಿಗ್ರಾಮ ಸಮೀಪದ ಅದ್ದಿಹಳ್ಳಿ ಗ್ರಾಮದ ಲಕ್ಷ್ಮಿದೇವಿ ದೇವಾಲಯದಲ್ಲಿನ ದೇವರ ಚಿನ್ನಾಭರಣ ಕಳವು ಮಾಡಿದ ಹಿನ್ನೆಲೆಯಲ್ಲಿ ದೇವಾಲಯದ ಅರ್ಚಕರು ಮತ್ತು ಗ್ರಾಮಸ್ಥರು ಶಾಂತಿಗ್ರಾಮ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದರು. ಸೆ. 29ರಂದು ಖಚಿತ ಮಾಹಿತಿಯ ಮೇರೆಗೆ ಹೊಂಗೆರೆಯ ಆಂಜನೇಯಸ್ವಾಮಿ ದೇವಾಲಯದ ಸಮೀಪ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮನಗರ ಜಿಲ್ಲೆಯ ದೊಡ್ಡಗಂಗವಾಡಿ ಗ್ರಾಮದ ಅನಿಲ್ ಅಲಿಯಾಸ್ ಅನಿ(28) ಬಂಧಿತ ಆರೋಪಿಯಾಗಿದ್ದು, ಈತ ದೇವಸ್ಥಾನಕ್ಕೆಂದು ಬಂದು ದೇವರ ಕೊರಳಲ್ಲಿದ್ದ ಚಿನ್ನದ ಆಭರಣ ಹಾಗೂ ದೇವಾಲಯದಲ್ಲಿದ್ದ ಹುಂಡಿ ಒಡೆದು ಅದರಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದ.
ತನಿಖೆ ವೇಳೆ ಈತ ಹಾಸನ ಜಿಲ್ಲೆಯ ಕೊಣನೂರು, ಹಳ್ಳಿಮೈಸೂರು, ಹೊಳೆನರಸೀಪುರ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿ ಸೇರಿದಂತೆ ಒಟ್ಟು 5 ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ದೇವಸ್ಥಾನಕ್ಕೆ ಭೇಟಿ ಕೊಡುವ ನೆಪದಲ್ಲಿ ದೇವಾಲಯದಲ್ಲಿನ ದೇವರ ವಿಗ್ರಹದ ಮೇಲಿನ ಆಭರಣಗಳನ್ನು ಕಳ್ಳತನ ಮಾಡುವ ಹವ್ಯಾಸದಲ್ಲಿ ತೊಡಗಿದ್ದು, ಹಾಸನದ ಶಾಂತಿಗ್ರಾಮ ಪೊಲೀಸರಿಗೆ ಸಿಕ್ಕಿ ಜೈಲು ಪಾಲಾಗಿದ್ದಾನೆ.
ಇನ್ನು ಈತನಿಂದ ಅದ್ದಿಹಳ್ಳಿ ದೇವಾಲಯದ ಚಿನ್ನಾಭರಣ ಸೇರಿದಂತೆ ಒಂದು ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದು, ಆತನ ಬಳಿಯಿದ್ದ 12 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್ಐ ಹೆಚ್ ಕೃಷ್ಣ, ಸಿಬ್ಬಂದಿಗಳಾದ ಸುಬ್ರಹ್ಮಣ್ಯ, ನಿಶಾಂತರ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರವರು ಶ್ಲಾಘಿಸಿ ವಿಶೇಷ ಬಹುಮಾನ ಘೋಷಿಸಿರುತ್ತಾರೆ.