ಹಾಸನ: ಬಾಲಕಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಏನೂ ಗೊತ್ತಿಲ್ಲದಂತೆ ನಟನೆ ಮಾಡಿದ್ದ ಆಟೋ ಚಾಲಕನೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಸದ್ಯ ಆರೋಪಿಯನ್ನು ಹಾಸನದ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಶಾಲೆಯೊಂದರಿಂದ ಏಳನೇ ತರಗತಿ ವಿದ್ಯಾರ್ಥಿನಿ ನ. 7ರಂದು ನಾಪತ್ತೆಯಾಗಿದ್ದಳು. ಶಾಲೆಗೆ ಹೋದ ಬಾಲಕಿಯು ನಾಪತ್ತೆಯಾಗಿದ್ದ ಬಗ್ಗೆ ಗಾಬರಿಗೊಂಡ ಪೋಷಕರು ನುಗ್ಗೇಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ, ಆಟೋ ಚಾಲಕ ಗಿರೀಶ್ ಎಂಬಾತನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ವಿಚಾರಣೆ ನಡೆಸಿದರೂ ಆತ ತನಗೇನೂ ಗೊತ್ತೇ ಇಲ್ಲ ಎಂದು ನಾಟಕವಾಡಿದ್ದ. ಈಗ ಆತನೇ ಸಮಾಜವೇ ತಲೆತಗ್ಗಿಸುವಂತಹ ಕೃತ್ಯ ಎಸಗಿದ್ದಾನೆ.
ಇದೀಗ ಪೊಲೀಸರಿಗೆ ಸಿಕ್ಕಿರುವ ಬಾಲಕಿಯು ನಡೆದಿದ್ದ ಸಂಪೂರ್ಣ ವೃತ್ತಾಂತವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ತನಗೆ ಎಷ್ಟರ ಮಟ್ಟಿಗೆ ಲೈಂಗಿಕ ನೋವನ್ನು ಆತ ಕೊಟ್ಟಿದ್ದ ಎಂಬುದನ್ನು ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ. ಇದೆಲ್ಲದರಿಂದ ಬೇಸರಗೊಂಡು ಊರನ್ನೇ ಬಿಟ್ಟಿದ್ದಾಗಿ ನೊಂದು ನುಡಿದಿದ್ದಾಳೆ.
ಬಾಲಕಿ ಮೇಲೆ ಅತ್ಯಾಚಾರ.. ತಾಲೂಕಿನ ಹಾಸ್ಟೆಲ್‌ನಲ್ಲಿದ್ದುಕೊಂಡು ಓದುತ್ತಿದ್ದ ಬಾಲಕಿಯನ್ನು ಶಾಲೆಗೆ ಕರೆದುಕೊಂಡು ಹೋಗಿ ಬರಲು ಪರಿಚಯಸ್ಥ ಆಟೋ ಚಾಲಕ ಗಿರೀಶ್‌ನನ್ನು ನೇಮಿಸಲಾಗಿತ್ತು. ಎಂದಿನಂತೆ ಆಟೋದಲ್ಲಿ ಕರೆದುಕೊಂಡು ಹೋಗಿ ಬರುತ್ತಿದ್ದ ಆತ, ಕೊನೆ ಕೊನೆಗೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರಾರಂಭಿಸಿದ್ದಾನೆ. ಹೀಗೆ ಒಂದು ದಿನ ಬಾಲಕಿ ಮೇಲೆ ಅತ್ಯಾಚಾರ ಸಹ ಎಸಗಿದ್ದಾನೆ. ಇದಕ್ಕಾಗಿ ತನ್ನ ಆಟೋವನ್ನೇ ಬಳಸಿಕೊಂಡಿದ್ದು, ಆಟೋ ಮೇಲೆ ಟಾರ್ಪಲ್ ಹಾಕಿ ಯಾರಿಗೂ ಕಾಣದಂತೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಬಾಲಕಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ ಎಂದು ತಿಳಿದುಬಂದಿದೆ.
ದಿನೇ ದಿನೆ ಆತನ ಕಿರುಕುಳ ಹೆಚ್ಚಾಗಿದ್ದು, ಇದರಿಂದ ನೊಂದ ಬಾಲಕಿಯು ಊರನ್ನೇ ಬಿಡುವ ನಿರ್ಧಾರ ಮಾಡಿ ನಾಪತ್ತೆಯಾಗಿದ್ದಳು. ಆದರೆ, ಈ ಯಾವ ವಿಷಯವೂ ತನಗೆ ಗೊತ್ತೇ ಇಲ್ಲದಂತೆ ಗಿರೀಶ್ ನಾಟಕವಾಡಿದ್ದ. ನಾಪತ್ತೆಗೆ ಮುಂಚೆ ಗಿರೀಶ್ ಮೊಬೈಲ್‌ನಿಂದಲೇ ತನ್ನ ಪೋಷಕರಿಗೆ ಕರೆ ಮಾಡಿ ಬಾಲಕಿ ಮಾತನಾಡಿದ್ದಳು. ಈ ಹಿನ್ನೆಲೆಯಲ್ಲಿ ಪೋಷಕರು ಗಿರೀಶ್ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು.
ತುಮಕೂರಲ್ಲಿ ಪತ್ತೆ: ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ಶಾಲೆಯಿಂದ ವಾಪಸ್ ಬಂದು ರಸ್ತೆಯೊಂದರಲ್ಲಿ ಏಕಾಂಗಿಯಾಗಿ ನಿಂತಿರುವುದು ಪತ್ತೆಯಾಗಿತ್ತು. ಅಣತಿ ಶಾಲೆ ಬಳಿಯಿಂದ ಕಾರೆಹಳ್ಳಿಗೆ ಆಟೋದಲ್ಲಿ ಹೋಗಿ ಅಲ್ಲಿಂದ ತುಮಕೂರು ಬಸ್ ಹತ್ತಿ ತಿಪಟೂರಿಗೆ ಬಂದಿದ್ದಳು. ಬಸ್‌ನಲ್ಲಿ ಅಳುತ್ತಿದ್ದ ಬಾಲಕಿಯನ್ನು ಕಂಡಿದ್ದ ಸಹ ಪ್ರಯಾಣಿಕ ಮಹಿಳೆಯೊಬ್ಬರು ಆಕೆಯನ್ನು ತಮ್ಮ ಮನೆಗೆ ಕರೆದೊಯ್ದಿದ್ದರು.
ಈ ವೇಳೆ ತನಗೆ ಯಾರೂ ಇಲ್ಲ, ತಾನೊಬ್ಬಳು ಅನಾಥೆಯಂದು ಬಾಲಕಿ ಹೇಳಿಕೊಂಡಿದ್ದಳಂತೆ. ಕೊನೆಗೆ ಆಕೆಯನ್ನು ಕ್ರೈಸ್ತ ಮಿಷನರಿಯೊಂದಕ್ಕೆ ಸೇರಿಸಲಾಗಿತ್ತು. ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ತುಮಕೂರಿನಿಂದ ಪೊಲೀಸರಿಗೆ ಮಾಹಿತಿ ದೊರೆತಿದ್ದು, ಆಕೆಯನ್ನು ರಕ್ಷಣೆ ಮಾಡಲಾಗಿತ್ತು. ಗಿರೀಶ್‌ನ ಈ ಹೇಯ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಪೋಕ್ಸೋ ಕಾಯ್ದೆಯನ್ನು ದಾಖಲಿಸಲಾಗಿದೆ.