ಹಾಸನ: ಕ್ಯಾಂಟರ್ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಜರುಗಿದ ಅಪಘಾತದಲ್ಲಿ ತಾಯಿ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹೊರವಲಯ ಪೋದರ್ ಶಾಲೆ ಬಳಿ ಮಂಗಳವಾರ ನಡೆದಿದೆ. ಸ್ಥಳೀಯರು ಕೋಪಗೊಂಡು ಲಾರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಹಾಸನ ನಗರದ ಡೈರಿ ವೃತ್ತ ಬೆಂಗಳೂರು ರಸ್ತೆಯ ಬಳಿ ಇರುವ ರಾಯಲ್ ಅಪೋಲೊ ಶಾಲೆಯ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಕಮಲಮ್ಮ (71) ಹಾಗೂ ಸತೀಶ್ (42) ಮೃತಪಟ್ಟಿದ್ದಾರೆ. ಸಾರ್ವಜನಿಕರು ಸ್ಥಳದಲ್ಲಿ ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಿದರು.
ಬಡಾವಣೆ ಠಾಣೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿ ತಿಳಿಗೊಳಿಸಲು ಮುಂದಾದರು. ಲಾರಿ ವೇಗವಾಗಿ ಬಂದಿದ್ದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರ ಆರೋಪಿಸಿದರು. ರಸ್ತೆಯ ಎರಡು ಬದಿಗಳಲ್ಲಿ ಲಾರಿಗಳನ್ನು ಅಡ್ಡಲಾಗಿ ನಿಲ್ಲಿಸಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇದರಿಂದಾಗಿ 2 ಗಂಟೆಗೂ ಹೆಚ್ಚು ಕಾಲ ಸಂಚಾರದಟ್ಟಣೆ ಕಂಡುಬಂತು.
ಸ್ಥಳೀಯರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪಲ್ಟಿಯಾಗಿದ್ದ ಕ್ಯಾಂಟರ್ ಲಾರಿಯನ್ನು ಕ್ರೈನ್ ಮೂಲಕ ಮೇಲೆತ್ತಲು ಬಂದಾಗ ಸಾರ್ವಜನಿಕರು ತೆರವು ಮಾಡಲು ಬಿಡಲಿಲ್ಲ. ಸರ್ಕಾರದಿಂದ ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವ ಭರವಸೆ ಕೊಟ್ಟ ನಂತರ, ತೆರವಿಗೆ ಅನುವು ಮಾಡಿಕೊಟ್ಟರು. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇತ್ತೀಚಿನ ಅಪಘಾತ ಪ್ರಕರಣ: ವಿಜಯಪುರ ನಗರದ ಸಿಂದಗಿ ಬೈಪಾಸ್ ಬಳಿ ರಸ್ತೆಯಲ್ಲಿ (ಸೋಮವಾರ) ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ಮುಖಂಡೆ ವೀಣಾ ಕಾಶಪ್ಪನವರ ಕಾರು ಅಪಘಾತ ಸಂಭವಿಸಿದೆ. ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ವೀಣಾ ಕಾಶಪ್ಪನವರ ಅವರಿದ್ದ ಕಾರು ಎದುರುಗಡೆಯ ಕಾರಿಗೆ ಡಿಕ್ಕಿ ಹೊಡೆಯಿತು. ಈ ವೇಳೆ, ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡರು. ವೀಣಾ ಕಾಶಪ್ಪನವರಿಗೆ ಚಿಕ್ಕ ಗಾಯಗಳಾಗಿದ್ದು, ವಿಜಯಪುರ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕಾರಿನಲ್ಲಿದ್ದ ಓರ್ವ ಮತ್ತು ಬೈಕ್ ಸವಾರನಿಗೆ ಗಾಯಗಳಾಗಿದೆ. ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಜರುಗಿದೆ.
ಇದನ್ನೂ ಓದಿ: ಜಿಲ್ಲಾಧಿಕಾರಿ ಕಾರು ಅಪಘಾತ: ಮೂವರು ಸಾವು, ಇಬ್ಬರಿಗೆ ಗಾಯ