ಹಾಸನ: ನಿರಾಕ್ಷೇಪಣಾ ಪತ್ರವನ್ನು ನೀಡುವುದಕ್ಕೆ ಲಂಚ ಕೊಡಬೇಕೆಂದು ಬೇಡಿಕೆಯಿಟ್ಟು ಲಂಚ ಸ್ವೀಕರಿಸುವ ದೃಶ್ಯ ಈಗ ಸಾರ್ವಜನಿಕರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅರಸೀಕೆರೆ ಪಟ್ಟಣದ ವ್ಯಕ್ತಿಯೊಬ್ಬರು ಬೇಕರಿ ಉದ್ಯಮ ಪ್ರಾರಂಭಿಸಲು ವಿದ್ಯುತ್ ಸಂಪರ್ಕದ ಅವಶ್ಯಕತೆಯಿತ್ತು. ವಿದ್ಯುತ್ ಸಂಪರ್ಕಕ್ಕಾಗಿ ನಗರಸಭೆ ವತಿಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯಲು ನಗರಸಭಾ ಕಚೇರಿಗೆ ಅರ್ಜಿಯನ್ನು ಸಲ್ಲಿಸಿದ್ದರು.
ನಿರಾಕ್ಷೇಪಣಾ ಪತ್ರ ನೀಡಲು ಅಲ್ಲಿನ ದ್ವಿತೀಯ ದರ್ಜೆ ಸಹಾಯಕ ಕೃಷ್ಣೆಗೌಡ ₹ 2,500 ಗಳಿಗೆ ಬೇಡಿಕೆಯಿಟ್ಟು, ಎರಡನೇ ಕಂತಿನ 300 ರೂಪಾಯಿಗಳನ್ನು ಪಡೆಯುವಾಗ, ಸಾರ್ವಜನಿಕರ ಮೊಬೈಲ್ ಕ್ಯಾಮೆರಾದಲ್ಲಿ ಲಂಚ ಪಡೆಯುವ ದೃಶ್ಯ ಸೆರೆಯಾಗಿದ್ದು ಸಾರ್ವಜನಿಕರು ಈತನ ವಿರುದ್ಧ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ನಿರಾಕ್ಷೇಪಣಾ ಪತ್ರಕ್ಕಾಗಿ ನಾನು ಕೇವಲ 200 ರೂಪಾಯಿಗಳನ್ನು ಮಾತ್ರ ಅಧಿಕಾರಿಗೆ ಕೊಟ್ಟಿದ್ದು. ಆದರೆ ಕೆಲವರು ನಾನು ಕೊಡುವ ಹಣವನ್ನು ಚಿತ್ರೀಕರಣ ಮಾಡಿ ಲಂಚ ಕೊಡುತ್ತಿದ್ದೇನೆ ಎಂದು ಬಿಂಬಿಸಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ. ನಾನು ಕೊಟ್ಟ ಹಣಕ್ಕೆ ನಗರಸಭೆಯವರು ರಸೀದಿ ಕೊಟ್ಟಿದ್ದಾರೆ ಎಂದು ಸ್ವತಃ ಬೇಕರಿ ಮಾಲೀಕ ಹೇಳಿಕೆ ನೀಡಿದ್ದು ಅಧಿಕಾರಿಗಳು ಕೆಟ್ಟ ಹೆಸರು ತರಲು ಯಾರಾದರೂ ಕುತಂತ್ರ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದ್ದು, ಇದಕ್ಕೆ ಸ್ವತಃ ಕೃಷ್ಣೇಗೌಡ ಉತ್ತರ ನೀಡಬೇಕಿದೆ.
ಕೊರೊನ ಲಾಕ್ಡೌನ್ ವೇಳೆ ನಗರಸಭೆಯ ಅಧಿಕಾರಿಗಳು ಟಿಕ್ ಟಾಕ್ ವಿಡಿಯೋ ಮೂಲಕ ಸುದ್ದಿಯಾಗಿದ್ದರು. ಈಗ ಲಂಚಾವತಾರ ಮಾಡೋ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು ಕೂಡಲೇ ಇಂತಹ ಲಂಚಬಾಕ ಅಧಿಕಾರಿಯಾಗಿರುವ ಕೃಷ್ಣೇಗೌಡ ನನ್ನ ತಕ್ಷಣ ಕೆಲಸದಿಂದ ವಜಾಗೊಳಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.