ಅರಕಲಗೂಡು(ಹಾಸನ): ಉಕ್ರೇನ್ನಲ್ಲಿ ಸಿಲುಕಿದ್ದ ತಾಲೂಕಿನ ಕೆಸವತ್ತೂರು ಗ್ರಾಮದ ಹಿಮನ್ ರಾಜ್ ಮಂಗಳವಾರ ಸ್ವಗ್ರಾಮಕ್ಕೆ ಮರಳಿದ್ದಾರೆ. ಉಕ್ರೇನ್ ಮೆಡಿಕಲ್ ನ್ಯಾಷನಲ್ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್ ಪ್ರಥಮ ವರ್ಷದ ಮೆಡಿಕಲ್ ವಿದ್ಯಾರ್ಥಿಯಾಗಿದ್ದ ಹಿಮನ್ರಾಜ್ ಕಳೆದ 3 ತಿಂಗಳ ಹಿಂದಷ್ಟೇ ವೈದ್ಯಕೀಯ ವ್ಯಾಸಂಗಕ್ಕಾಗಿ ಉಕ್ರೇನ್ಗೆ ತೆರಳಿದ್ದರು. ಇವರು ಕಲಿಯುತ್ತಿದ್ದ ಯುನಿವರ್ಸಿಟಿ ಪಶ್ಚಿಮ ಗಡಿಯಲ್ಲಿದ್ದು, ಯುದ್ಧ ಭೀತಿಗೆ ಸಿಲುಕಿತ್ತು.
ಉಜ್ಹೋರೋದ್ ಯುನಿವರ್ಸಿಟಿಯಿಂದ 240 ಭಾರತೀಯ ವಿದ್ಯಾರ್ಥಿಗಳು ಭಾನುವಾರ ಬಸ್ ಮೂಲಕ ಪಕ್ಕದ ರಾಷ್ಟ್ರವಾದ ಹಂಗೇರಿ ಬುಡಾಪೆಸ್ಟ್ ವಿಮಾನ ನಿಲ್ದಾಣ ತಲುಪಿ ಅಲ್ಲಿಯ ಭಾರತೀಯ ರಾಯಭಾರಿಯನ್ನು ಸಂಪರ್ಕಿಸಿ ದೆಹಲಿಯ ಇಂದಿರಾಗಾಂಧಿ ನ್ಯಾಷನಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ನಂತರ ಬೆಂಗಳೂರಿನ ಮೂಲಕ ಸ್ವಗ್ರಾಮ ಕೆಸವತ್ತೂರು ತಲುಪಿದ್ದಾರೆ.
ಹಾಸನದ ಬಿಜಿಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯು ಹಾಗೂ ಹಾಸನದ ವಿದ್ಯಾನಿಕೇತನದಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ.87ರಷ್ಟು ಫಲಿತಾಂಶ ಪಡೆದು ಉಕ್ರೇನ್ನಲ್ಲಿನ ಮೆಡಿಕಲ್ ಕಾಲೇಜಿಗೆ 5.25 ಲಕ್ಷ ಶುಲ್ಕ ನೀಡಿ ಸೇರಿದ್ದರು.
ತಮ್ಮ ಮಗ ಉಕ್ರೇನ್ನಿಂದ ಸುರಕ್ಷಿತವಾಗಿ ಮನೆ ತಲುಪಿರುವುದು ಮಹದಾನಂದ ತಂದಿದೆ ಎಂದು ಪೋಷಕರಾದ ಮಹಾದೇವ್- ರಾಧಿಕಾ ಸಂತಸ ವ್ಯಕ್ತಪಡಿಸಿದರು.
ಓದಿ: ಉಕ್ರೇನ್ನಲ್ಲಿ ರಷ್ಯಾ ದಾಳಿ ವೇಳೆ ಮೃತಪಟ್ಟ ಹಾವೇರಿಯ ಯುವಕನ ಮೃತದೇಹ ಪತ್ತೆ