ಸಕಲೇಶಪುರ (ಹಾಸನ): ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದ ಎರಡು ಕೊಲೆ ಪ್ರಕರಣ ಮಾಸುವ ಮುನ್ನವೇ ಸಕಲೇಶಪುರ ತಾಲೂಕಿನ ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ರೈಟರ್ ಓರ್ವನ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ದೊರಕಿದೆ.
ಸಂತೋಷ್ (28) ಮೃತ ವ್ಯಕ್ತಿ. ಮೂಲತಃ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬೆಟ್ಟದ ಮನೆಯ ನಿವಾಸಿಯಾಗಿರುವ ಸಂತೋಷ್, ತಾಲೂಕಿನ ಹಾನುಬಾಳು ಹೋಬಳಿಯ ಅಗ್ನಿ ಗ್ರಾಮದ ಮದನ್ ಎಂಬುವವರ ಕಾಫಿ ಎಸ್ಟೇಟ್‌ನಲ್ಲಿ ಸುಮಾರು ಐದು ವರ್ಷಗಳಿಂದ ರೈಟರ್ ಆಗಿ ಕೆಲಸ ಮಾಡುತ್ತಿದ್ದನು. ನಿನ್ನೆ ವರಮಹಾಲಕ್ಷ್ಮೀ ಹಬ್ಬವಿದ್ದುದರಿಂದ ಮಧ್ಯಾಹ್ನ ಸ್ನೇಹಿತರೊಂದಿಗೆ ಹೊರಗಡೆ ಹೋಗಿದ್ದ. ಈ ವೇಳೆ ಸಣ್ಣಪುಟ್ಟ ಗಲಾಟೆ ಮಾಡಿಕೊಂಡು ಮನೆಗೆ ಹಿಂತಿರುಗಿದ್ದನೆಂದು ತಿಳಿದು ಬಂದಿದೆ. ಪುನಃ ಸಂಜೆ 7ರ ಸಮಯದಲ್ಲಿ ಅಕ್ಕಪಕ್ಕದ ಸ್ನೇಹಿತರ ಜೊತೆಗೂಡಿ ಹೊರ ಹೋದ ಸಂತೋಷ್ ಶನಿವಾರ ಮುಂಜಾನೆ ಹೆಣವಾಗಿ ಪತ್ತೆಯಾಗಿದ್ದಾನೆ.
ಮೃತ ಸಂತೋಷನಿಗೆ ಇಸ್ಪೀಟ್ ಆಡುವ ಚಟವಿತ್ತು ಎಂದು ತಿಳಿದು ಬಂದಿದ್ದು, ಶುಕ್ರವಾರ ಸಂಜೆ ತನ್ನ ಮಡದಿಯ ಹತ್ತಿರ 2 ಸಾವಿರ ರೂ.ಗಳನ್ನು ತೆಗೆದುಕೊಂಡು ಹೊರಹೋಗಿದ್ದ. ಇಸ್ಪೀಟ್ ಆಟ ಆಡುವ ಸಮಯದಲ್ಲಿ ಸ್ನೇಹಿತರೊಂದಿಗೆ ಜಗಳವಾಡಿಕೊಂಡು ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ.
ಕೊಲೆ ಮಾಡಿರುವ ಕಿರಾತಕರು ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಮೃತಪಟ್ಟ ಸಂತೋಷನ ದೇಹವನ್ನು ಅವರ ಮನೆಯ ಅಣತಿ ದೂರದಲ್ಲಿ ಒಂದು ಕಲ್ಲಿನ ಮೇಲೆ ಮಲಗಿಸಿ ಹೋಗಿದ್ದಾರೆ. ಶನಿವಾರ ಬೆಳಗ್ಗೆ ದಾರಿ ಹೋಕರೊಬ್ಬರು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ.
ಘಟನೆ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸರು ಇಬ್ಬರು ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕಿವಿಯ ಬಲಭಾಗದಲ್ಲಿ ಗಾಯ ಕಂಡು ಬಂದಿದ್ದು ಸಂತೋಷನ ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದುಬಂದಿಲ್ಲ. ಪೊಲೀಸರ ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಬಿ.ಆರ್. ಗೋಪಿ, ವೃತ್ತ ನಿರೀಕ್ಷಕ ಗಿರೀಶ್ ಹಾಗೂ ಗ್ರಾಮಾಂತರ ಠಾಣಾ ಪಿಎಸ್‌ಐ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.