ಹಾಸನ : ಒಂದು ಕಡೆ ಪೆಟ್ರೋಲ್ ಗಗನಕ್ಕೇರಿದ್ದು, ಮತ್ತೊಂದು ಕಡೆ ಡೀಸೆಲ್ ರೇಟು ಕೂಡ ದುಬಾರಿ. ಹೀಗಾಗಿ ವಾಹನಗಳನ್ನು ಖರೀದಿಸುವವರು ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಮಧ್ಯೆ ಹಾಸನ ಜಿಲ್ಲೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳು ವಾಹನ ಖರೀದಿ ಮಾಡುವವರಿಗೆ ಹೊಸದೊಂದು ವಾಹನವನ್ನು ಪರಿಚಯಿಸುವ ಮೂಲಕ ಮುನ್ನುಡಿ ಬರೆದಿದ್ದಾರೆ.
ನೋಡೋದಿಕ್ಕೆ ಪುಟ್ಟ ವಾಹನ. ಅಷ್ಟೇ ಅಲ್ಲ, ಇದನ್ನು ಕಡಿಮೆ ಪ್ರಮಾಣದ ವೆಚ್ಚದಲ್ಲಿ ತಯಾರಿಸಲಾಗಿದೆ. ಹಾಗಾಗಿ ಇದು ಮುಂದಿನ ಪೀಳಿಗೆಗೆ ಅನುಕೂಲವಾಗುವ ಹೈಬ್ರಿಡ್ ವಾಹನ ಎಂದರೆ ತಪ್ಪಾಗಲ್ಲ. ಹಾಸನ ಜಿಲ್ಲೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಯಾರು ಮಾಡಿರುವ ಈ ವಿಭಿನ್ನ ವಾಹನಕ್ಕೆ ಈಗ ಎಲ್ಲರ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪಟ್ಟಣದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿರುವ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್, ಮೆಕ್ಯಾನಿಕಲ್ ಹಾಗೂ ಆಟೋಮೊಬೈಲ್ ವಿದ್ಯಾರ್ಥಿಗಳು ತಯಾರಿಸಿರುವ ಈ ವಿಭಿನ್ನ ಕಾರು ನೋಡುಗರಿಗೂ ಆಕರ್ಷಕವಾಗಿದ್ದು, ಕಾರ್ ಸಿದ್ಧಪಡಿಸಿದ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಈ ಪುಟ್ಟ ಕ್ಯಾಂಪಸ್ ಕಾರನ್ನು ತಯಾರಿಸಲು ಎರಡು ತಿಂಗಳು ಕಾಲಾವಕಾಶ ತೆಗೆದುಕೊಂಡಿದ್ದು, ಬೇರೆ ಬೇರೆ ವಿಭಾಗದ ವಿದ್ಯಾರ್ಥಿಗಳು ಇದನ್ನು ಒಟ್ಟಿಗೆ ಸೇರಿ ನಿರ್ಮಾಣ ಮಾಡಿದ್ದಾರೆ. ಈ ಕಾರು ಚಲಾಯಿಸಲು ಪೆಟ್ರೋಲು ಬೇಕಿಲ್ಲ, ಡಿಸೇಲ್ ಕೂಡಾ ಬೇಕಿಲ್ಲ. ಸೌರ ವಿದ್ಯುತ್ ಮತ್ತು ಬ್ಯಾಟರಿ ಚಾಲಿತ ವಾಹನ ಇದಾಗಿದ್ದು, ಕಡಿಮೆ ಖರ್ಚಿನಲ್ಲಿ ತಯಾರಾದ ಕಾರಾಗಿದೆ. ನೋಡುವುದಕ್ಕೂ ಆಕರ್ಷಣೀಯವಾಗಿದೆ. ಬೇಸಿಗೆ ಕಾಲದಲ್ಲಿ ಇದು ಸೂರ್ಯನ ಕಿರಣಗಳಿಂದ ಹೆಚ್ಚು ಚಾರ್ಜ್ ಆಗಿ ಮೈಲೇಜ್ ಕೂಡ ಕೊಡುತ್ತದೆ. ಅದೇ ರೀತಿ ಮಾನ್ಸೂನ್ ಸಂದರ್ಭದಲ್ಲಿ ಬ್ಯಾಟರಿಯಿಂದ ಇದನ್ನು ಚಲಾಯಿಸಬಹುದಾಗಿದೆ. ಹಾಗಾಗಿ ಇದನ್ನು ಹೈಬ್ರಿಡ್ ಕಾರು ಎನ್ನಲಾಗ್ತಿದೆ.
2.75 ಲಕ್ಷದಲ್ಲಿ ನಿರ್ಮಾಣವಾದ ಕಾರು ಇದಾಗಿದ್ದು, ಸದ್ಯ ಕ್ಯಾಂಪಸ್ನಲ್ಲಿ ವಿಕಲಚೇತನರಿಗೆ ಮತ್ತು ಸಣ್ಣಪುಟ್ಟ ಕೆಲಸಗಳಿಗೆ ಉಪಯೋಗಿಸಲು ತಯಾರಿಸಲಾಗಿದೆ. ಬೇಸಿಗೆ ಕಾಲದಲ್ಲಿ ಹೆಚ್ಚಿನ ಬ್ಯಾಟರಿ ಚಾರ್ಜ್ನ ಅಗತ್ಯವಿಲ್ಲದೆ ಅದು ಚಲಿಸುತ್ತದೆ. ಆದರೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಕನಿಷ್ಠ ಆರು ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಸುಮಾರು 20 ಕಿಲೋಮೀಟರ್ ಓಡಿಸಬಹುದು.
ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಗ್ರೀನ್ ಕ್ಯಾಂಪಸ್ ಮಾಡುವ ಉದ್ದೇಶದಿಂದ ಈ ಕಾರನ್ನು ತಯಾರಿಸಿದ್ದಾರೆ. ಇದಕ್ಕೆ ಸರ್ಕಾರದ ಸಹಾಯಧನವೂ ಲಭಿಸಿದೆ. ಇಂತಹ ಕಾರು ತಯಾರಿಕೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸಿದ್ದಾರೆ ಕಾಲೇಜಿನ ಮುಖ್ಯಸ್ಥ ಹಾರನಹಳ್ಳಿ ಅಶೋಕ್.
ಲಿಥಿಯಂ ಬ್ಯಾಟರಿ ಮತ್ತು ಸೋಲಾರ್ ಪ್ಯಾನಲ್ ಅಳವಡಿಸಿ ತಯಾರು ಮಾಡಿರುವ ಕಾರು ಇದು. ಸೋಲಾರ್ ಪ್ಯಾನಲ್ ಅನ್ನು ಇನ್ವರ್ಟರ್ಗೆ ಕನೆಕ್ಟ್ ಮಾಡಿ ರೆಕ್ಟಿಫೈಯರ್ ಮೂಲಕ, ಬ್ಯಾಟರಿಗೆ ಕನೆಕ್ಟ್ ಮಾಡಿ, ಅದರಿಂದ ಮೋಟರ್ ಕಂಟ್ರೋಲ್ ಮೂಲಕ ಚಲಿಸುವಂತೆ ಮಾಡಿದ್ದೇವೆ. ಹಾಗಾಗಿ ಕಡಿಮೆ ವೆಚ್ಚದಲ್ಲಿ ಸದ್ಯ ಕಾಲೇಜಿನ ಆವರಣದಲ್ಲಿ ವಿಕಲಚೇತನರಿಗೆ ಮತ್ತು ಇತರೆ ಸಣ್ಣಪುಟ್ಟ ಬಳಕೆಗೆ ಉಪಯೋಗವಾಗುವಂತೆ ತಯಾರಿಸಿದ್ದೇವೆ ಎಂದು ಅಂತಿಮ ವರ್ಷದ ಸಂಶೋಧಕ ವಿದ್ಯಾರ್ಥಿ ಪ್ರದೀಪ್ ವಿವರಿಸಿದ್ದಾರೆ.
ಒಟ್ಟಿನಲ್ಲಿ ತೈಲ ಬೆಲೆ ಗಗನಕ್ಕೆ ಏರುತ್ತಿದ್ದು, ವಾಹನ ಕೊಂಡುಕೊಳ್ಳುವುದಕ್ಕೂ ಕಷ್ಟವಿರುವ ಸಂದರ್ಭದಲ್ಲಿ ಸೋಲಾರ್ ಮತ್ತು ಬ್ಯಾಟರಿ ಚಾಲಿತ ಹೈಬ್ರಿಡ್ ಪುಟ್ಟ ಕಾರು ಮಾರುಕಟ್ಟೆಗೆ ಲಗ್ಗೆಯಿಟ್ಟರೆ, ತೈಲ ಬಳಸಿ ಚಲಿಸುವ ವಾಹನಗಳು ತೆರೆಯ ಹಿಂದೆ ಸರಿಯುವುದರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿ : ಧೀರಾ ರೊಬೋಟ್ಸ್.. ಇನ್ನು ನಿಮ್ಮನೆಗೆ ಫುಡ್ ಡೆಲಿವರಿ ಮಾಡ್ತವೆ !