ಹಾಸನ: ಮಾರ್ಚ್ 21ರಿಂದ ದೇಶದಲ್ಲಿ ಕೊರೊನಾ ಲಾಕ್ಡೌನ್ ಪ್ರಾರಂಭವಾಯಿತು. ಈ ಹಿನ್ನೆಲೆಯಲ್ಲಿ ದೇಶದ ಸಾವಿರಾರು ವ್ಯಾಪಾರಗಳು ಕುಸಿತ ಕಂಡವು. ಕೆಲವು ದೊಡ್ಡ ದೊಡ್ಡ ಕಂಪನಿಗಳು ಲಾಕ್ಡೌನ್ ಆದ ಮೂರು ತಿಂಗಳಲ್ಲಿ ಪತನದಂಚಿಗೆ ಸರಿದವು. ಕೆಲ ಬೀದಿಬದಿಯ ವ್ಯಾಪಾರಿಗಳು ಸೇರಿದಂತೆ ಹತ್ತಾರು ಬಗೆಯ ವ್ಯಾಪಾರಸ್ಥರು ಅನ್ಲಾಕ್ ಆದ್ರೂ ಸಹ ತಮ್ಮ ಬದುಕನ್ನ ಇನ್ನು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಇವೆಲ್ಲದರ ನಡುವೆ ಇಲ್ಲೊಬ್ಬ ರೈತ ಬಂಗಾರದ ಬೆಳೆ ಬೆಳೆದು ಲಾಭ ಕಂಡಿದ್ದಾರೆ.
ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿಯ ಜಗದೀಶ್ ಎಂಬುವರು ಕೊರೊನಾ ಸಂಕಷ್ಟದ ನಡುವೆ ಚೆಂಡುಹೂ ಬೆಳೆ ಬೆಳೆದು ಯಶಸ್ಸು ಕಂಡಿದ್ದಾರೆ. ಮನೆಯ ಪಕ್ಕದಲ್ಲಿರುವ 1 ಎಕರೆಯ ಜಮೀನಿನಲ್ಲಿ ಚೆಂಡು ಹೂ ಬೆಳೆದು ಲಾಭ ಕಂಡಿದ್ದಾರೆ. ಇನ್ನು ಒಂದು ಎಕರೆಗೆ 10 ರಿಂದ 12 ಸಾವಿರ ಖರ್ಚು ಮಾಡಿದ್ರೆ ಸಾಕು, 70 ರಿಂದ 80 ಸಾವಿರ ರೂ. ಆದಾಯ ಗಳಿಸಬಹುದು ಎನ್ನುತ್ತಾರೆ ಇವರು.
ಕೊರೊನಾ ಸಂದರ್ಭದಲ್ಲಿ ಬಹಳಷ್ಟು ಮಂದಿ ಕೆಲವು ಬೆಳೆಗಳನ್ನ ಬೆಳೆದು ನಷ್ಟ ಅನುಭವಿಸಿದ್ದಾರೆ. ಕೆಲವರು ಬೆಳೆದ ಬೆಳೆಯನ್ನ ಮಾರಾಟ ಮಾಡಲು ಸಾಧ್ಯವಾಗದೇ ಕೈಗೆ ಬಂದ ಫಸಲನ್ನ ಉತ್ತು ಸುಮ್ಮನಾಗಿಬಿಟ್ಟಿದ್ದಾರೆ. ಆದರೆ ಜಗದೀಶ್ ಬಂಗಾರದ ಹೂಗಳನ್ನ ಬೆಳೆದು ಲಾಭ ಕಂಡಿದ್ದಾರೆ.
ಇನ್ನು ಬೆಳೆ ಕುರಿತು ಮಾಹಿತಿ ನೀಡಿದ ಅವರು, ರಾಗಿ ಬೆಳೆಯಂತೆಯೇ ಮಡಿ ಮಾಡಿ ನಂತರ ಜಮೀನನ್ನು ಹದಗೊಳಸಿ ಗಿಡಗಳನ್ನ ನೆಡಬೇಕು. ಮೂರು ತಿಂಗಳಾದ ಬಳಿಕ ಚೆಂಡು ಹೂ ಬಿಡಲು ಪ್ರಾರಂಭಿಸುತ್ತದೆ. ಎಕರೆಯಲ್ಲಿ ಒಂದು ಬಾರಿ ಸುಮಾರು 2.5 ಸಾವಿರ ಕೆ.ಜಿಗಳಷ್ಟು ಹೂ ಬಿಡುತ್ತದೆ. ಕೆ.ಜಿಗೆ 7 ರೂ.ನಂತೆ ಮನೆಯ ಮುಂದೆಯ ಬಂದು ವ್ಯಾಪಾರ ಮಾಡಿಕೊಂಡು ಹೋಗುತ್ತಾರೆ. ಹಾಗಾಗಿ ಖರ್ಚಿಲ್ಲದೇ ಲಾಭ ಗಳಿಸಬಹುದಾದ ಉತ್ತಮ ಕೃಷಿ ಎಂದರೆ ತಪ್ಪಾಗಲ್ಲ ಎನ್ನುತ್ತಾರೆ.
ಪ್ರತಿ ವರ್ಷ ಹೂ ಬೆಳೆದಾಗಲೂ ಪ್ರವಾಸಿಗರು ಹೂದೋಟಕ್ಕೆ ಬಂದು ಫೋಟೋ ಕ್ಲಿಕ್ಕಿಸಿಕೊಂಡು ಆನಂದಿಸುತ್ತಿದ್ದರಂತೆ. ಆದರೆ ಕೊರೊನಾ ಇರುವ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಈ ಹೂವಿನ ತೋಟದಲ್ಲಿ ಇತ್ತೀಚೆಗೆ ಧಾರಾವಾಹಿ ಶೂಟಿಂಗ್ ಸಹ ನಡೆದಿತ್ತು ಎಂದು ಜಗದೀಶ್ ಹೇಳಿದ್ದಾರೆ.