ಹಾಸನ: ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಯ ಜೊತೆ ಕೈಜೋಡಿಸಿದೆ. ಇದರಿಂದಾಗಿ ಮಹಿಳೆಯರು ತಮ್ಮ ಮಾಂಗಲ್ಯ ಅಡವಿಟ್ಟು ತಮ್ಮವರಿಗೆ ಚಿಕಿತ್ಸೆ ಕೊಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗಳವಾರ ಜಿಲ್ಲೆಯಲ್ಲಿ ಇನ್ನೂರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದರೆ ಅದಕ್ಕೆ ಜಿಲ್ಲಾಡಳಿತದ ವೈಫಲ್ಯವೇ ಕಾರಣ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಕಿಡಿಕಾರಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವರಿಕೆ ಮಾಡಿ 15ಕ್ಕೂ ಹೆಚ್ಚು ಪತ್ರ ಬರೆದಿದ್ದೇನೆ. ಆದರೂ ಯಾವುದೇ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಡಿಸಿ ಕೇಳಿದರೆ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಹಾಕುತ್ತಾರೆ. ಉಸ್ತುವಾರಿ ಸಚಿವರನ್ನು ಕೇಳಿದರೆ ಮುಖ್ಯಮಂತ್ರಿ ಜೊತೆ ಮಾತಾಡಿ ಹೇಳುತ್ತೇನೆ ಎನ್ನುತ್ತಾರೆ. ಈಗಾಗಲೇ ನಾನು ಮುಖ್ಯಕಾರ್ಯದರ್ಶಿಯವರ ಗಮನಕ್ಕೆ ತಂದಾಗ ಪ್ರತಿ ಕ್ಷೇತ್ರಕ್ಕೂ 1 ಕೋಟಿ ರೂ. ನೀಡಿದ್ದೇನೆ ಎನ್ನುತ್ತಾರೆ. ಆದರೆ ಜಿಲ್ಲಾಧಿಕಾರಿಗಳು ಯಾವುದೇ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆಪಾದಿಸಿದರು.
ಜಿಲ್ಲೆಯಲ್ಲಿ ನಿತ್ಯ 40ಕ್ಕೂ ಹೆಚ್ಚು ಮಂದಿ ಸಾಯುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ 10-20 ಎಂದು ತೋರಿಸುತ್ತಿದೆ. ಎರಡನೇ ಅಲೆಯಲ್ಲಿ ಇನ್ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ನೇರವಾಗಿ ಜಿಲ್ಲಾಧಿಕಾರಿಗಳೇ ಕಾರಣ ಎಂದು ಗಂಭೀರ ಆರೋಪ ಮಾಡಿದರು.
ಖಾಸಗಿ ಆಸ್ಪತ್ರೆಯೊಂದಕ್ಕೆ ಡಿಸಿಯವರು ಶಾಮಿಲ್ ಆಗಿರಬೇಕು. ಇದುವರೆಗೂ ಯಾವುದೇ ಒಂದು ಖಾಸಗಿ ಆಸ್ಪತ್ರೆಯ ಮೇಲೂ ದಾಳಿ ನಡೆಸಿ ಅಕ್ರಮ ಬಯಲಿಗೆಳೆದಿಲ್ಲ. ಜನರ ತಾಳ್ಮೆ ಪರೀಕ್ಷೆ ಮಾಡಬೇಡಿ. ಜನರು ದಂಗೆ ಎದ್ದರೆ ನಾವು ಉಳಿಯಲ್ಲ ನೀವು ಉಳಿಯಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಕೇವಲ ಪ್ರಾಥಮಿಕ ಸಂಪರ್ಕವನ್ನು ದಾಖಲಾತಿ ಮಾಡಿಕೊಂಡು ಸುಲಿಗೆ ಮಾಡುತ್ತಿದ್ದಾರೆ. ಹಣ ಕಟ್ಟಲು ಸಾಧ್ಯವಾಗದೇ ಮಹಿಳೆಯರು ಮಾಂಗಲ್ಯ ಮಾರಿ ಹಣ ಕಟ್ಟುತ್ತಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿಗಳೆ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಸನದ ಸ್ಪರ್ಶ ಆಸ್ಪತ್ರೆಯಲ್ಲಿ ಒಂದು ಹೆರಿಗೆ ಮಾಡಿಸಲು 10 ಲಕ್ಷ ರೂ. ಕೇಳುತ್ತಾರೆಂದರೆ ಜಿಲ್ಲಾಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದರ್ಥ. ಕೋವಿಡ್ ಎರಡನೇ ಅಲೆ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಬೇರೆ ಜಿಲ್ಲೆಗಳು ನಿರ್ವಹಣೆಗಾಗಿ 10-20 ಕೋಟಿ ರೂ. ಬೇಕು ಎಂದು ಪ್ರಧಾನಿ ಅವರಿಗೆ ಕೇಳಿದರೆ, ಜಿಲ್ಲಾಧಿಕಾರಿಗಳು ಕೇವಲ 3 ಕೋಟಿ ರೂ. ಸಾಕು ಅಂತ ಬರೆದಿದ್ದಾರೆ. ಇಂತಹ ಜಿಲ್ಲಾಧಿಕಾರಿ ಇಟ್ಟುಕೊಂಡು ಏನು ಮಾಡಬೇಕು ನಾವು ಎಂದು ಪ್ರಶ್ನಿಸಿದರು.
ಬಡವರು ಕೊಡುತ್ತಿರುವ ಕಷ್ಟ ನೋಡಿದರೆ ಹೊಟ್ಟೆ ಉರಿದುಹೋಗುತ್ತೆ. ಅದಕ್ಕೆ ಜನರೆ ಎದ್ದೇಳಿ ಪ್ರಾಣ ಉಳಿಯುವ ತನಕ ಹೋರಾಡಿ ಎಂದು ನಾನು ಹೇಳಬೇಕಾಗುತ್ತೆ. ಇವತ್ತು ಬೆಂಗಳೂರಿಗೆ ಆಂಬುಲೆನ್ಸ್ ಚಾಲಕರು 20ರಿಂದ 25 ಸಾವಿರ ರೂ. ಬಾಡಿಗೆ ಮಾಡಿದ್ದಾರೆ. ಆರ್ಟಿಓ ಅಧಿಕಾರಿಗಳು ಈ ಒಂದು ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿದರು.