ಹಾಸನ: ರಾಜ್ಯದ ಸಂಪೂರ್ಣ ಅಭಿವೃದ್ಧಿಗೆ ಸರ್ಕಾರ ಬದ್ಧವಿದ್ದು, ಮುಂದಿನ ದಿನಗಳಲ್ಲಿ ಸಾಮಾನ್ಯ ಜನತೆಯ ಹಿತದೃಷ್ಟಿಯಿಂದ ಸಾಕಷ್ಟು ಜನಪರ ಯೋಜನೆಗಳು ಜಾರಿಯಾಗಲಿವೆ. ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಮುನ್ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಶಾಸಕ ಪ್ರೀತಂ ಜೆ.ಗೌಡ ಅಭಿಪ್ರಾಯಪಟ್ಟರು.
ನಗರದ 29ನೇ ವಾರ್ಡ್‍ನಲ್ಲಿ ನಗರಸಭೆಯಿಂದ ನಿರ್ಮಿಸಲಾಗಿರುವ ಶುದ್ಧ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳ ಲಾಭ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಆಗ ಮಾತ್ರ ಸಮಾಜದಲ್ಲಿ ಅಸಮಾನತೆ ತೊಲಗಿಸಲು ಸಾಧ್ಯವಿದೆ. ಸಮಾಜದಲ್ಲಿ ಶೋಷಿಸಲ್ಪಟ್ಟಿರುವವರನ್ನು ತಮ್ಮ ಜೊತೆಯಲ್ಲಿ ಕರೆದೊಯ್ಯುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಸ್ಥಳೀಯರು ಯೋಗಭವನ ಸೇರಿದಂತೆ ಹಲವು ಬೇಡಿಕೆಗಳನ್ನು ಶಾಸಕರ ಮುಂದಿಟ್ಟರು. ಇದಕ್ಕೆ ಸ್ಪಂದಿಸಿದ ಅವರು ಶೀಘ್ರವೇ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ನಗರಸಭೆ ಸದಸ್ಯರಾದ ಮಂಗಳ ಪ್ರದೀಪ್, ಸುಜಾತಾ ಮಹೇಶ್, ಜಯಲಕ್ಷ್ಮೀ, ಬಿಜೆಪಿ ಮುಖಂಡರಾದ ಪುನೀತ್, ಮಹೇಶ್, ಪ್ರದೀಪ್, ಶಿವು ಸೆರಿದಂತೆ ಇತರರು ಹಾಜರಿದ್ದರು.