ಹಾಸನ: ಮಹಾರಾಷ್ಟ್ರದ ಮುಂಬೈನಿಂದ ಬಂದ ಎರಡು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ಕು ಮಂದಿಯಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ. ಜೊತೆಗೆ ಮತ್ತೋರ್ವನಿಗೂ ಕೊರೊನಾ ಸೋಂಕು ತಗುಲಿದೆ. ಈಗಾಗಲೇ ಎಲ್ಲರನ್ನು ಕೋವಿಡ್-19 ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗತ್ಯ ಮುನ್ನೆಚ್ಚರಿಕ ಕ್ರಮವನ್ನು ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.
ಕಳೆದ ಎರಡು ದಿನಗಳ ಹಿಂದೆ ಕುಟುಂಬದ ನಾಲ್ಕು ಜನ ಸದಸ್ಯರು ಮಹಾರಾಷ್ಟ್ರದಿಂದ ಬಾಡಿಗೆಯ ಎರಡು ಕಾರಿನಲ್ಲಿ ಅರಸೀಕೆರೆ ಕಡೆಯಿಂದ ಚನ್ನರಾಯಪಟ್ಟಣಕ್ಕೆ ಬಂದಿದ್ದರು. ಗಡಿಯಲ್ಲಿ ತಡೆದು ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದೆ. ಇವರ ಜೊತೆ ಮತ್ತೋರ್ವನಿಗೂ ಸೋಂಕು ತಗುಲಿದೆ. ಈಗಾಗಲೇ ಎಲ್ಲರನ್ನು ಹಾಸನದದ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.
ಪ್ರಾಥಮಿಕ ಮತ್ತು ಸೆಕೆಂಡರಿ ಕಾಂಟಾಕ್ಟ್ ಆಧಾರಿಸಿ ಕ್ರಮ ಕೈಗೊಳ್ಳಲಾಗುವುದು. ಬಾಡಿಗೆ ಕಾರನ್ನು ಪಡೆದಿರುವ ಟ್ರಾವೆಲ್ಸ್ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಇದನ್ನಾಧರಿಸಿ ಕಾರಿನ ಚಲನವಲನ ಬಗ್ಗೆ ಪರಿಶೀಲನೆ ಮಾಡಲಾಗುವುದು. ಸೋಂಕಿತರು ಗ್ರಾಮಕ್ಕೆ ಇನ್ನು ಹೋಗಿರಲಿಲ್ಲ. ನೇರವಾಗಿ ಆಸ್ಪತ್ರೆಗೆ ಬಂದಿರುವುದಾಗಿ ಮಾಹಿತಿ ಬಂದಿದೆ ಎಂದು ಮಾಹಿತಿ ನೀಡಿದರು.
ಅವರ ಸ್ವಾಬ್ ಪರೀಕ್ಷೆ ಮಾಡಲಾಗುವುದು. ಕೊರೊನಾ ಸೋಂಕಿತರ ಬಗ್ಗೆ ಸಾರ್ವಜನಿಕರು ಆತಂಕಪಡುವಂತಿಲ್ಲ. ಆದರೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಲು ಮನವಿ ಮಾಡಿದರು.