ಹಾಸನ: ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ 118 ಗ್ರಾಮಗಳಲ್ಲಿ ವಿವಿಧ ರೀತಿಯ ಹಾನಿ ಸಂಭವಿಸಿದೆ. ನಷ್ಟವಾದ 43 ಕುಟುಂಬಗಳಿಗೆ ತುರ್ತು 10 ಸಾವಿರ ರೂ. ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ ಅತಿವೃಷ್ಠಿಯಲ್ಲಿ ಮನೆ ಹಾನಿಗೀಡಾಗಿ ದಾಖಲಾತಿಗೆ ಬಾಕಿಯಿರುವ ಮನೆಗಳನ್ನು ರಾಜೀವ್ ಗಾಂಧಿ ಪೋರ್ಟಲ್ ಮೂಲಕ ಡಾಟಾ ಎಂಟ್ರಿ ಮಾಡಲಾಗುತ್ತಿದೆ. ಅನುಮೋದನೆ ಸಿಕ್ಕ ನಂತರ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಜಿಲ್ಲೆಯಲ್ಲಿ ಕೃಷಿಗೆ ಸಂಬಂಧಿಸಿದಂತೆ 4,460 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯುಂಟಾಗಿದೆ. ಹಲವೆಡೆ ಮೆಕ್ಕೆಜೋಳ, ಸಕಲೇಶಪುರ ತಾಲ್ಲೂಕಿನಲ್ಲಿ ಭತ್ತ ಹಾನಿಗೀಡಾಗಿದೆ.
ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ 940 ಹೆಕ್ಟೇರ್ ಪ್ರದೇಶದಲ್ಲಿ ನಷ್ಟ ಉಂಟಾಗಿದೆ. ಹೆಚ್ಚಾಗಿ ಮಳೆ ಬರದಿದ್ದರೂ ಅತಿಯಾದ ಗಾಳಿಯಿಂದ ಕಾಫಿ ಕಾಯಿ ಉದುರಿದ್ದು, ಶೇ.33ಕ್ಕಿಂತ ಹೆಚ್ಚು ನಷ್ಟ ಉಂಟಾಗಿದ್ದಲ್ಲಿ ಅಂತಹವರಿಗೆ ಪರಿಹಾರ ನಿಡಲಾಗುತ್ತದೆ.
ಜಿಲ್ಲೆಯಲ್ಲಿ ಆಗಸ್ಟ್ 2ರಿಂದ ಸಕಲೇಶಪುರದಲ್ಲಿ ಶೇ.442 ಮಿ.ಮೀ, ಹೊಳೆನರಸೀಪುರ ಶೇ.306 ಮಿ.ಮೀ, ಹಾಸನ ಶೇ.252 ಮಿ.ಮೀ, ಚನ್ನರಾಯಪಟ್ಟಣ ಶೇ.162 ಮಿ.ಮೀ, ಬೇಲೂರಿನಲ್ಲಿ ಶೇ.419 ಮಿ.ಮೀ ಹಾಗೂ ಆಲೂರು ತಾಲ್ಲೂಕಿನಲ್ಲಿ ಶೇ.347 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಜಿಲ್ಲೆಯ ಹೇಮಾವತಿ ಜಲಾಶಯಕ್ಕೆ 11 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಈಗಾಗಲೇ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ನಗರಪ್ರದೇಶದಲ್ಲಿ ಸುಮಾರು 150 ಕಿಲೋ ಮೀಟರ್ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 426 ಕಿ.ಮೀನಷ್ಟು ರಸ್ತೆಗಳು ಹಾಳಾಗಿವೆ ಎಂಬ ಮಾಹಿತಿ ಬಂದಿದೆ.
ಮಳೆಯಿಂದ ಜಿಲ್ಲೆಯಲ್ಲಿನ 99 ಶಾಲೆ, 31 ಅಂಗನವಾಡಿ ಕೇಂದ್ರಗಳಿಗೆ ಹಾನಿಯಾಗಿದ್ದು, ಅವುಗಳಿಗೆ ಎಸ್ಡಿಆರ್ಎಫ್ ಮೂಲಕ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಅಷ್ಟರಲ್ಲಿ ಸಾಧ್ಯವಾಗದಿದ್ದಲ್ಲಿ ಪ್ರತ್ಯೇಕ ಪ್ರಸ್ತಾವನೆ ಕಳುಹಿಸಿ, ಆಯಾ ಇಲಾಖೆಗಳ ಅನುದಾನದಿಂದ ಪರಿಹಾರ ಕ್ರಮ ಕೈಗೊಳ್ಳಲಾಗುತ್ತದೆ. ಮಳೆಯಿಂದ ಈ ಬಾರಿ 330 ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯವಾದ್ದು, ಸಾವಿರಕ್ಕೂ ಅಧಿಕ ವಿದ್ಯುತ್ ಕಂಬಗಳು ಬಿದ್ದುಹೋಗಿವೆ. ಎಲ್ಲಾ ಗ್ರಾಮಗಳಲ್ಲೂ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡಿಸಿ ವಿವರಿಸಿದರು.