ಹಾಸನ: ಜಿಲ್ಲೆಯ ಕೋವಿಡ್-19 ಆಸ್ಪತ್ರೆಯಲ್ಲಿ ಸೋಂಕಿತರಿಗಾಗಿ 400 ಹಾಸಿಗೆಗಳ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, 20 ಜನರ ಸಾಮರ್ಥ್ಯ ಇರುವ ಕೊಠಡಿಗಳಲ್ಲಿ 10 ಜನರನ್ನಷ್ಟೇ ಇರಿಸಲಾಗುತ್ತಿದೆ. 30 ಜನ ಸೋಂಕಿತರಿಗೆ ಒಬ್ಬ ಶುಶ್ರೂಷಕರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಕೃಷ್ಣಮೂರ್ತಿ ಹೇಳಿದರು.
ಆಸ್ಪತ್ರೆಯ 4ನೇ ಮಹಡಿಯಲ್ಲಿ ಕೋವಿಡ್-19 ಸೋಂಕಿತರನ್ನು, 2ನೇ ಮಹಡಿಯಲ್ಲಿ ಶಂಕಿತರನ್ನು ಹಾಗೂ ತಳ ಮಹಡಿಯಲ್ಲಿ ಸ್ಕ್ರೀನಿಂಗ್ ತಪಾಸಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಆಸ್ಪತ್ರೆಯಲ್ಲಿರುವವರಿಗೆ ಗುಡ್ ಲೈಫ್ ಹಾಲಿನ ಜೊತೆಗೆ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದ್ದು, ಸೋಂಕಿತರೆಲ್ಲರೂ ಆರೋಗ್ಯವಾಗಿದ್ದಾರೆ. ಸೋಂಕು ದೃಢಪಟ್ಟಿರುವ 10 ಮಕ್ಕಳನ್ನು ವಿಶೇಷವಾಗಿ ಚಿಕಿತ್ಸೆ ಮಾಡಲಾಗುತ್ತಿದೆ, ಜೊತೆಗೆ ಸೋಂಕಿತರೆಲ್ಲರ ದಿನಚರಿಯನ್ನು ಸಿಸಿಟಿವಿಯ ಮೂಲಕ ಗಮನಿಸಲಾಗುತ್ತಿದೆ.
ಅಗತ್ಯವಿರುವ ಸೋಂಕಿತರಿಗೆ ಫೋನ್ ಕರೆಯ ಮೂಲಕ ಮನೋವೈದ್ಯರಿಂದಲೂ ಸ್ಥೈರ್ಯ ತುಂಬಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿ ಇಲ್ಲಿಗೆ 8 ದಿನಗಳು ಕಳೆದಿದೆ. 14ನೇ ದಿನದ ಗಂಟಲು ದ್ರವ ಮಾದರಿಯ ಪರೀಕ್ಷೆಯ ನಂತರ ಸೋಂಕಿತರ ಆರೋಗ್ಯ ಸ್ಥಿತಿ ಗಮನಿಸಿ ತಜ್ಞ ವೈದ್ಯರ ನಿರ್ಧಾರದ ಮೇಲೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು. ಆದರೆ, ಮನೆಯಲ್ಲೂ 7 ದಿನಗಳ ಕಾಲ ಹೋಮ್ ಕ್ವಾರಂಟೈನ್ ಮಾಡಲಾಗುವುದು ಎಂದರು.
ಕೋವಿಡ್-19 ಆಸ್ಪತ್ರೆಯಲ್ಲಿ 22 ಜನ ಶುಶ್ರೂಷಕರು, 6 ಮಂದಿ ಡಾಕ್ಟರ್ಗಳು, 20 ಜನ ಗ್ರೂಪ್ ಡಿ ಮತ್ತು ಹೌಸ್ ಕೀಪರ್ಸ್ ಕಾರ್ಯನಿರ್ವಹಿಸುತ್ತಿದ್ದು, ಮೂರು ಪಾಳಿಯಲ್ಲಿ ವೈದ್ಯರ ತಂಡ ಸೋಂಕಿತರ ಚಿಕಿತ್ಸಾ ಕಾರ್ಯದಲ್ಲಿ ತೊಡಗಿದ್ದಾರೆ. ಅವರ ಕರ್ತವ್ಯ ಮುಗಿದ ನಂತರ ಒಂದು ವಾರಗಳ ಕಾಲ ಹೋಮ್ ಕ್ವಾರಂಟೈನ್‌ನಲ್ಲಿ ಇದ್ದು, ನಂತರ ಮನೆಗೆ ಹೋಗುತ್ತಾರೆ ಎಂದು ಹೇಳಿದರು.