ಹಾಸನ: ನಗರದ ಹೊರವಲಯದ ಕೆಂಚಟ್ಟಳ್ಳಿ ಬಳಿ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಟಾಟಾ ಸುಮೋಗೆ ಹಿಂಬದಿಯಿಂದ ಕ್ವಾಲಿಸ್ ಕಾರು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ನಾಲ್ವರು ಮೃತಪಟ್ಟು, 11 ಮಂದಿ ಗಾಯಗೊಂಡಿದ್ದಾರೆ.
ಮೃತಪಟ್ಟವರನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನವರು ಎಂದು ಗುರುತಿಸಲಾಗಿದೆ. ಮೃತರನ್ನು ಸುನಿಲ್ ಕುಮಾರ್ (25) ಪ್ರದೀಪ್ ಕುಮಾರ್ (26) ನವೀನ್ ಕುಮಾರ್ (25) ಮತ್ತು ಚಂದ್ರಶೇಖರ್ (26) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಟಾಟಾ ಸುಮೋದಲ್ಲಿದ್ದ ಎಲ್ಲರೂ ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದವರಾಗಿದ್ದು, ಕುಟುಂಬ ಸಮೇತ ಧರ್ಮಸ್ಥಳಕ್ಕೆ ಹೊರಟಿದ್ದರು. ಕ್ವಾಲಿಸ್ನಲ್ಲಿದ್ದ ಕೋಲಾರ ಜಿಲ್ಲೆಯ ಕೆಜಿಎಫ್ ಮೂಲದ ಕುಟುಂಬದವರು ಉಡುಪಿಗೆ ಮದುವೆಗೆ ತೆರಳುತ್ತಿದ್ದರು. ಅವೈಜ್ಞಾನಿಕವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಂಪ್ಸ್ ನಿರ್ಮಾಣ ಮಾಡಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗ್ತಿದೆ.
ಮಾಹಿತಿ ತಿಳಿದ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಸಂಬಂಧ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.