ಹಾಸನ: ಮಳೆ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ 302 ಕೋಟಿ ಹಾನಿಯಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಗಿರೀಶ್ ತಿಳಿಸಿದರು.
ಜಿಲ್ಲೆಯಲ್ಲಿ ಮಳೆಯಿಂದ 2,300 ಮನೆಗಳಿಗೆ ಹಾನಿಯಾಗಿದ್ದು, ಪರಿಹಾರ ವಿತರಿಸಬೇಕಿದೆ. 125 ಮನೆಗಳು ಸಂಪೂರ್ಣ ಹಾನಿಯಾಗಿದ್ದು, ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಬೇಕಿದೆ. ಶೇ.25 ರಿಂದ ಶೇ.75 ರಷ್ಟು ಹಾನಿಯಾಗಿದ್ದಲ್ಲಿ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು, ಶೇ.25 ಕ್ಕಿಂತ ಕಡಿಮೆ ಹಾನಿಯಾಗಿದ್ದರೆ 25 ಸಾವಿರ ರೂ. ಪರಿಹಾರವನ್ನು ರಾಜೀವ್‌ಗಾಂಧಿ ಹೌಸಿಂಗ್ ಕಾರ್ಪೋರೇಷನ್ ವತಿಯಿಂದ ನೀಡಲಾಗುವುದು ಎಂದು ಹೇಳಿದರು.
ಎರಡು ದಿನದಿಂದ ಬೀಳುತ್ತಿರುವ ಮಳೆಯಿಂದಾಗಿ ಹೇಮಾವತಿ ನದಿ ಎರಡು ಅಡಿಯಷ್ಟು ಏರಿಕೆ ಕಂಡಿದೆ. ಅಪಾಯದ ಮಟ್ಟ ತಲುಪಿಲ್ಲ, ನೆರೆ ಹಾವಳಿ ಸಂಬಂಧ ರಾಜ್ಯ ಮುಖ್ಯ ಕಾರ್ಯದರ್ಶಿಗಳು ಸಭೆ ನಡೆಸಿ ಸೂಚನೆಯನ್ನು ನೀಡಿದ್ದಾರೆ ಎಂದರು.
ಆಸ್ತಿ ಹಾನಿ ಸಂಬಂಧ 1600 ಜನರಿಗೆ ತಲಾ ಹತ್ತು ಸಾವಿರದಂತೆ ಪರಿಹಾರ ವಿತರಿಸಬೇಕಿದೆ. ಕಳೆದ ಒಂದು ವಾರದಿಂದ ಹೆಚ್ಚುವರಿಯಾಗಿ 50 ರಿಂದ 60 ಅರ್ಜಿಗಳು ಬಂದಿವೆ. ಅವೆಲ್ಲವನ್ನು ಪರಿಶೀಲಿಸಿ ಪರಿಹಾರ ವಿತರಿಸಬೇಕಿದೆ ಎಂದು ಹೇಳಿದರು. ಶಿರಾಡಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ, ಭೂಕುಸಿತ ಆದರೂ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಹಾಗೂ ತುರ್ತು ಕಾಮಗಾರಿ ಕೈಗೊಳ್ಳುವಂತೆ ಹೆದ್ದಾರಿ ಇಲಾಖೆ ಎಂಜಿನಿಯರ್‌ಗಳ ಜತೆ ಚರ್ಚಿಸಲಾಗುವುದು ಎಂದರು.
ಸರ್ಕಾರ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಇಲಾಖಾವಾರು ಪರಿಹಾರದ ಹಣ ಬಿಡುಗಡೆ ಮಾಡಲಿದೆ, ಹಣ ಬಿಡುಗಡೆಯಾದ ಕೂಡಲೇ ಪರಿಹಾರ ದೊರಕಲಿದೆ ಎಂದು ಹೇಳಿದರು.