ಹಾಸನ: ಜಿಲ್ಲೆಯಲ್ಲಿ ಹೊಸದಾಗಿ 28 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 426ಕ್ಕೆ ಏರಿಕೆಯಾಗಿದೆ. 246 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 176 ಮಂದಿ ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 4 ಮಂದಿ ವೈರಸ್ನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಪತ್ತೆಯಾದ ಕೋವಿಡ್ ಪ್ರಕರಣಗಳಲ್ಲಿ ಅರಸೀಕೆರೆ ತಾಲೂಕಿನಲ್ಲಿ 14, ಚನ್ನರಾಯಪಟ್ಟಣ ತಾಲೂಕಿನಲ್ಲಿ ಒಬ್ಬರು, ಆಲೂರು ತಾಲೂಕಿನ ಇಬ್ಬರು, ಹಾಸನ ತಾಲೂಕಿನ 6 ಮಂದಿ, ಹೊಳೆನರಸೀಪುರ ತಾಲೂಕಿನ 4 ಜನ ಹಾಗೂ ಸಕಲೇಶಪುರ ತಾಲೂಕಿನ ಒಬ್ಬರು ಸೇರಿದಂತೆ ಒಟ್ಟು 28 ಮಂದಿಗೆ ಪಾಸಿಟಿವ್ ಬಂದಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 58 ಸ್ಥಳಗಳನ್ನು ಕಂಟೈನ್ಮೆಂಟ್ ವಲಯಗಳನ್ನಾಗಿ ಮಾಡಿದ್ದು, ಅದರಲ್ಲಿ 11 ಸ್ಥಳಗಳನ್ನು ಈ ವಲಯದಿಂದ ತೆಗೆಯಲಾಗಿದೆ. ಅವುಗಳನ್ನು ಹೊರತುಪಡಿಸಿ ಇಂದು ಪತ್ತೆಯಾದ 13 ಪ್ರಕರಣಗಳಲ್ಲಿ ಹೊಸ ಕಂಟೈನ್ಮೆಂಟ್ ವಲಯ ಮಾಡಲಾಗುತ್ತಿದೆ ಎಂದು ಹೇಳಿದರು. ಕೋವಿಡ್‌ನಿಂದ ನಿನ್ನೆ ಮೃತಪಟ್ಟ ವ್ಯಕ್ತಿಯು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರು ಉಸಿರಾಟದ ತೊಂದರೆ ಹಾಗೂ ಜ್ವರ ಕಾಣಿಸಿಕೊಂಡ ಕಾರಣ ಜೂನ್ 29ರಂದು ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಜೂನ್ 30ರಂದು ಮರಣ ಹೊಂದಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಪ್ರತಿದಿನ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಸ್ವತಃ ತಾವೇ ಬೇರೆಯವರಿಂದ ದೂರವಿದ್ದು ಕೊರೊನಾ ತಡೆಯುವಲ್ಲಿ ಮುಂದಾಗಬೇಕು ಎಂದು ಮನವಿ ಮಾಡಿದರು. ಎಲ್ಲಾ ತಾಲೂಕು ತಹಶೀಲ್ದಾರರೊಂದಿಗೆ ಸಭೆ ನಡೆಸಲಾಗಿದೆ. ಮಾಸ್ಕ್ ಧರಿಸದೇ ಅನವಶ್ಯಕವಾಗಿ ಓಡಾಡಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವಂತೆ ಆದೇಶ ನೀಡಲಾಗಿದೆ. ಪ್ರತೀ ತಾಲೂಕಿನಲ್ಲಿಯೂ ಹತ್ತು ಸಾವಿರ ದಂಡ ಸಂಗ್ರಹಿಲು ಸೂಚಿಸಲಾಗಿದೆ ಎಂದು ತಿಳಿಸಿದರು. ನಗರದ ಹೊರ ಭಾಗದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಗಾಗಿ 2 ಎಕರೆ ಸ್ಥಳ ನೋಡಿದ್ದು, ಸ್ಥಳೀಯ ಶಾಸಕರೊಂದಿಗೆ ಚರ್ಚಿಸಲಾಗಿದೆ. ಈ ಕುರಿತು ಸಾರ್ವಜನಿಕರ ಮನವೊಲಿಸಿ ಕಾರ್ಯರೂಪಕ್ಕೆ ತರಲಾಗುತ್ತದೆ ಎಂದರು. ತಾಲೂಕುವಾರು ವಿವರ..... ಅರಸೀಕೆರೆ - 43
ಅರಕಲಗೂಡು - 19
ಆಲೂರು - 20
ಬೇಲೂರು - 9
ಚನ್ನರಾಯಪಟ್ಟಣ - 208
ಹೊಳೆನರಸೀಪುರ - 69
ಹಾಸನ - 53
ಸಕಲೇಶಪುರ - 01
ಇತರೆ ಜಿಲ್ಲೆ - 04