ಹಾಸನ: ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಗೆ 165 ಕೋಟಿ ರೂ. ವೆಚ್ಚದ ಕಾಮಗಾರಿಗೆ ಕ್ರಿಯಾ ಯೋಜನೆ ರೂಪುಗೊಂಡಿದೆ.
ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಪ್ರಕಟಿಸಿರುವ ಕಲುಷಿತ ನದಿಗಳ ಪಟ್ಟಿಗೆ ಸೇರಿರುವ ಯಗಚಿ ನದಿ ಸ್ವಚ್ಛತೆ ಹಾಗೂ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಗೆ ಶಾಸಕ ಪ್ರೀತಂ ಜೆ. ಗೌಡ ನಡೆಸಿದ ಪ್ರಯತ್ನಕ್ಕೆ ಫಲ ದೊರೆತಂತಾಗಿದೆ.
ಅ. 1 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಭೂ ಸ್ವಾಧೀನಕ್ಕೆ ಮೀಸಲಿಟ್ಟಿರುವ ಅನುದಾನವನ್ನು ಬೇರೆ ಯಾವುದೇ ಕಾಮಗಾರಿಗೆ ಬಳಸುವಂತಿಲ್ಲ. ಯೋಜನೆಗೆ ಸರ್ಕಾರಿ ಜಮೀನು ಲಭ್ಯವಿಲ್ಲವಾಗಿದ್ದರೆ ಮಾತ್ರ ಖಾಸಗಿ ಜಮೀನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಸರ್ಕಾರ ಸೂಚನೆ ನೀಡಿದೆ.
ಒಳಚರಂಡಿ ವ್ಯವಸ್ಥೆಗಾಗಿ ಮಂಜೂರಾಗಿರುವ 165 ಕೋಟಿ ರೂ.ಗಳಲ್ಲಿ ರಾಜ್ಯದ ಪಾಲು ಶೇ. 75 ರಷ್ಟಿದ್ದು, ಆರ್ಥಿಕ ಸಂಸ್ಥೆ ಸಾಲ ಶೇ. 20 ರಷ್ಟಿದೆ ಹಾಗೂ ಶೇ. 5 ರಷ್ಟು ಅನುದಾನವನ್ನು ನಗರಸಭೆ ಭರಿಸಲಿದೆ.
ರೈಲ್ವೆ ಹಳಿ ದಾಟಲು ಮೂರು ಕಡೆ ಟ್ರಂಚ್ಲೆಸ್ ತಂತ್ರಜ್ಞಾನ ಅಳವಡಿಸಬೇಕಿದ್ದು, ಅದಕ್ಕಾಗಿ 70 ಲಕ್ಷ ರೂ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಗೆ ಮತ್ತು ಕಲೆಕ್ಷನ್ ಚೇಂಬರ್‌ಗಳಿಗೆ ಹಾಗೂ ವಿದ್ಯುತ್ ಪೂರೈಕೆಗೆ 2.50 ಕೋಟಿ ರೂ. ತೆಗೆದಿಡಲಾಗಿದೆ. ಈ ಎಲ್ಲ ಕಾಮಗಾರಿಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯಬೇಕಿದ್ದು, ಅದಕ್ಕಾಗಿ 16.81 ಕೋಟಿ ರೂ. ನಿಗದಿಪಡಿಸಲಾಗಿದೆ.