ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನೇ ದಿನೆ ಉಲ್ಬಣವಾಗುತ್ತಿದ್ದು, ಬುಧವಾರ ಹೊಸದಾಗಿ 14 ಪ್ರಕರಣ ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 136ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ ಪತ್ತೆಯಾದ ಸೋಂಕಿತರಲ್ಲಿ 13 ಮಂದಿ ಮಹಾರಾಷ್ಟ್ರದಿಂದ ಆಗಮಿಸಿದ್ದು, ಒಬ್ಬರು ತಮಿಳುನಾಡಿನಿಂದ ಪ್ರಯಾಣ ಮಾಡಿದ್ದ ಹಿನ್ನೆಲೆ ಹೊಂದಿದ್ದಾರೆ ಎಂದು ತಿಳಿಸಿದರು. ಸೋಂಕಿತರೆಲ್ಲರನ್ನೂ ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಅವರನ್ನು ಕ್ವಾರಂಟೈನ್‍ನಿಂದ ಬಿಡುಗಡೆ ಮಾಡುವ ಮುನ್ನ 14ನೇ ದಿನ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಅವರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ ಎಂದು ಹೇಳಿದರು.
ಕ್ವಾರಂಟೈನ್ ಕೇಂದ್ರದಲ್ಲಿ ಸೋಂಕಿತರೊಡನೆ ಇದ್ದವರನ್ನು ಪ್ರಾಥಮಿಕ ಸಂಪರ್ಕಿತರನ್ನಾಗಿ ಪರಿಗಣಿಸಿ ಅವರನ್ನು ಪುನಃ 14 ದಿನಗಳವರೆಗೆ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ. ನಗರದಲ್ಲಿ ನಾಲ್ಕು ಹಾಗೂ ಹೊಳೆನರಸೀಪುರದಲ್ಲಿ ಮೂರು ಸ್ಥಳಗಳನ್ನು ಕಂಟೇನ್ಮೆಂಟ್ ವಲಯಗಳನ್ನಾಗಿ ಮಾಡಲಾಗಿದೆ. ಆ ವಲಯಗಳಿಗೆ ಪ್ರತ್ಯೇಕ ಕಮಾಂಡರ್ಗಳನ್ನು ನೇಮಕ ಮಾಡಲಾಗಿದ್ದು, ಅಲ್ಲಿನ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಇಲ್ಲಿಯವರೆಗೂ 413 ಜನ ಕ್ವಾರಂಟೈನ್ ಅವಧಿ ಮುಗಿಸಿ ಪುನಃ ಪರೀಕ್ಷೆ ಮಾಡಿಸಿಕೊಂಡು ಮನೆಗಳಿಗೆ ತೆರಳಿದ್ದು, ಅವರಿಗೆ ಹೋಂ ಕ್ವಾರಂಟೈನ್‍ನಲ್ಲಿ ಇರಲು ಸೂಚಿಸಲಾಗಿದೆ. 136 ಮಂದಿಯ ಪರೀಕ್ಷಾ ವರದಿ ನಿರೀಕ್ಷೆಯಲ್ಲಿದ್ದು, ವರದಿ ಆಧರಿಸಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪಿ.ಎನ್.ಡಿ ಸೇರಿದಂತೆ ನಾಲ್ವರು ಸಿವಿಲ್ ಪೊಲೀಸ್ ಹಾಗೂ ಮೂವರು ಕೆ.ಎಸ್.ಆರ್.ಪಿ ಪೊಲೀಸರಿಗೆ ಸೋಂಕು ತಗುಲಿದ್ದು, ಎಲ್ಲರೂ ಕರ್ತವ್ಯದ ಮೇಲೆ ಹೊರ ಜಿಲ್ಲೆಗಳ ಚೆಕ್ ಪೋಸ್ಟ್ಗಳಲ್ಲಿ ಸೇವೆ ಸಲ್ಲಿಸಿ ಬಂದಿದ್ದರು ಎಂದು ಹೇಳಿದರು.