ಗದಗ : ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ನೂತನವಾಗಿ ಅಳವಡಿಸಿರುವ ಜಿಪ್‌ಲೈನ್ ಕ್ರೀಡೆಗೆ ಶಾಸಕ ಹೆಚ್ ಕೆ ಪಾಟೀಲರು ಮನಸೋತಿದ್ದಾರೆ. ಇವತ್ತು ಜಿಪ್ ಲೈನ್ ಕ್ರೀಡೆಯ ಬಳಿ ಬಂದು ಕ್ರೀಡೆಯಲ್ಲಿ ತೊಡಗಿದ್ದ ಯುವಕ-ಯುವತಿಯರ ಅನುಭವವನ್ನು ಹತ್ತಿರದಿಂದ ನೋಡಿ ಖುಷಿಪಟ್ಟರು.
ತಾವೂ ಸಹ ಒಂದು ಕೈ ನೋಡಿಯೇ ಬಿಡೋಣ ಅಂತಾ ಅಖಾಡಕ್ಕಿಳಿದೇ ಬಿಟ್ಟಿದ್ದರು. ಆದ್ರೆ, ಅಧಿಕಾರಿಗಳ ಸಲಹೆ ಮೇರೆಗೆ ಕ್ರೀಡೆಯನ್ನು ಆಡದೇ ಆಡುವವರನ್ನ ಹುರಿದುಂಬಿಸಿದರು. ಜೊತೆಗೆ ಅವರ ಅಭಿಮಾನಿಗಳು ಸಹ ಕ್ರೀಡೆಯನ್ನಾಡಿದರು. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿದ್ದು ಪಾಟೀಲ್ ಕೂಡ ಇದರಲ್ಲಿ ಭಾಗಿಯಾಗಿದ್ದರು.
ಜಿಪ್‌ಲೈನ್ ಇತ್ತೀಚೆಗೆ ಅತೀ ಹೆಚ್ಚು ಜನಪ್ರಿಯಗೊಳ್ತಿದೆ. ಅದರಲ್ಲೂ ಯುವಕ-ಯುವತಿಯರಿಗೆ ಅತೀ ಆಕರ್ಷಕ ಕ್ರೀಡೆಯಾಗಿದೆ. ಜಿಪ್‌ಲೈನ್ ಆರಂಭದಲ್ಲಿ ಕೇವಲ ಅಷ್ಟೇನೂ ಆದಾಯ ಬರ್ತಿರಲಿಲ್ಲ. ಯಾಕೆಂದರೆ, ಲಕ್ಷಾಂತರ ರೂ. ಖರ್ಚು ಮಾಡಿ ಇದನ್ನ ನಿರ್ಮಾಣ ಮಾಡಲಾಗಿತ್ತು.
ಆದ್ರೆ, ಜನರು ಬರದೆ ಅಧಿಕಾರಿಗಳು ಸಹ ನಮ್ಮ ಯೋಜನೆ ಫ್ಲಾಪ್ ಆಯ್ತು ಅಂತಾ ಅಂದುಕೊಂಡಿದ್ದರು. ಆದ್ರೆ, ಈಗ ಅವರ ನಿರೀಕ್ಷೆಗಿಂತ ಹೆಚ್ಚು ಜನರು ಈ ಕ್ರೀಡೆಗೆ ಪಿಧಾ ಆಗಿದ್ದಾರೆ. ಒಂದು ದಿನಕ್ಕೆ 10 ಸಾವಿರ ರೂ.ವರೆಗೆ ಜಿಪ್‌ಲೈನ್ ಕ್ರೀಡೆಯೊಂದರಿಂದಲೇ ಆದಾಯ ಬರ್ತಿದೆ ಎಂದು ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಸೆಲ್ಫಿ ಸಂಭ್ರಮ.. ಸೂರ್ಯಕಾಂತಿ ಜಮೀನುಗಳಿಗೆ ಲಗ್ಗೆ ಇಟ್ಟ ಪ್ರವಾಸಿಗರು..
ಜಿಪ್‌ಲೈನ್ ಕ್ರೀಡೆಯಿಂದ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಒಂದು ಮೆರಗು ಬಂದಿದೆ. ಯಾಕೆಂದರೆ, ಉದ್ಯಾನಕ್ಕೆ ಮಕ್ಕಳ ಸಮೇತ ಪೋಷಕರು ಬರ್ತಾರೆ. ಜೊತೆಗೆ ಯುವಕರಿಗೆ ಇಲ್ಲಿ ಇದೊಂದು ಅದ್ಭುತ ಮನರಂಜನಾ ಕ್ರೀಡೆಯಾಗಿದ್ದು, ಯುವ ಪೀಳಿಗೆಯನ್ನ ಹೆಚ್ಚು ಆಕರ್ಷಣೆ ಮಾಡ್ತಿದೆ.