ಗದಗ: ಸುತ್ತಲೂ ಹಚ್ಚ ಹಸಿರಿನ ಬೆಟ್ಟ ಗುಡ್ಡ, ಈ ಹಸಿರ ಸೊಬಗಿನ ನಡುವೆ ಆ ಬದಿಯಿಂದ ಈ ಬದಿಯವರೆಗೆ ಎತ್ತರಕ್ಕೆ ಹಾಕಿರುವ ಉದ್ದನೆಯ ತಂತಿ. ತಂತಿಯ ಮೇಲೆ ಇಲ್ಲಿಂದ ಅಲ್ಲಿಗೆ ಜರಿದು ಹೋಗುತ್ತಿರುವ ಜನ. ನಿಂತು ನೋಡಿ ಖುಷಿ ಪಡುತ್ತಿರುವವರು ಒಂದಿಷ್ಟು ಮಂದಿ. ಇದು ಗದಗ ತಾಲೂಕಿನ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ನೂತನವಾಗಿ ಅಳವಡಿಸಿರುವ ಜಿಪ್ ಲೈನ್ ಕ್ರೀಡೆಯ ಝಲಕ್.
ಹೌದು, ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಈಗ ಹೊಸ ಕ್ರೀಡೆಯೊಂದು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಕೈಗೆತ್ತಿಕೊಂಡಿದ್ದ ಜಿಪ್ ಲೈನ್ ಕಾಮಗಾರಿ ಈಗ ಪೂರ್ಣಗೊಂಡಿದ್ದು, ಪ್ರವಾಸಿಗರಿಗೆ ಮನರಂಜನೆಯ ರಸದೌತಣ ಬಡಿಸುತ್ತಿದೆ. ಜಿಪ್ ಲೈನ್ ಅನ್ನುವ ಈ ಕ್ರೀಡೆ ವಿದೇಶಿಗಳಲ್ಲಿ ಅಥವಾ ಉತ್ತರ ಭಾರತದಲ್ಲಿ ಯುವಕರನ್ನು ಸೆಳೆಯು ಪ್ರಮುಖ ಆಕರ್ಷಣೆಯಾಗಿದೆ.
ಏನಿದು ಜಿಪ್ ಲೈನ್..?
ತಂತಿಯ ಮೂಲಕ ಒಂದು ತುದಿಯಿಂದ ಇನ್ನೊಂದು ತುದಿಗೆ ಗುರುತ್ವಾಕರ್ಷಣೆಯ ಬಲದಿಂದ ತಲುಪುವುದಕ್ಕೆ ಜಿಪ್ ಲೈನ್ ಎನ್ನುತ್ತಾರೆ. ಇದನ್ನು ಈಶಾನ್ಯ ಭಾರತದ ಗುಡ್ಡಗಾಡು ಪ್ರದೇಶಗಳು, ಗಣಿಗಾರಿಕೆಗಳಲ್ಲಿ ಸರಕು ಸಾಗಿಸಲು ಬಳಸುತ್ತಿದ್ದರು. ಈಗ ಇದು ಯುವ ಜನರನ್ನು ಸೆಳೆಯುವ ಮನರಂಜನಾ ಕ್ರೀಡೆಯಾಗಿ ಮಾರ್ಪಟ್ಟಿದೆ. ಹೀಗಾಗಿ, ಅನ್ ಲಾಕ್ ಆಗಿದ್ದೇ ತಡ ಜಿಪ್ ಲೈನ್ ಆಡಲು ಪ್ರವಾಸಿಗರ ದಂಡು ಬಿಂಕದಕಟ್ಟಿಯ ಕಡೆ ಬರ್ತಿದೆ.
ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ ಅವರು ಅರಣ್ಯ ಮಂತ್ರಿಯಾಗಿದ್ದ ವೇಳೆ ಸುಮಾರು 32 ಲಕ್ಷ ರೂ. ವೆಚ್ಚದಲ್ಲಿ ಈ ಜಿಪ್ ಲೈನ್ ಕಾಮಗಾರಿಗೆ ಚಾಲನೆ ನೀಡಿದ್ದರು. ಸದ್ಯ, ಕಾಮಗಾರಿ ಪೂರ್ಣಗೊಂಡಿದ್ದು, ಲಾಕ್ ಡೌನ್ ವೇಳೆಯಲ್ಲಿ ಆದಾಯವಿಲ್ಲದೆ ಸೊರಗಿದ್ದ ಉದ್ಯಾನವನಕ್ಕೆ ಈಗ ಅತೀ ಹೆಚ್ಚು ಆದಾಯ ತಂದುಕೊಡ್ತಿದೆ.
ಇಲ್ಲಿನ ಸಿಬ್ಬಂದಿ ಸಂಬಳ ಸೇರಿದಂತೆ ಬಹಳಷ್ಟು ಖರ್ಚು-ವೆಚ್ಚಗಳನ್ನು ನೀಗಿಸಲು ಜಿಪ್ ಲೈನ್ ಅನುಕೂಲಕರವಾಗಿದೆ. ಜಿಪ್ ಲೈನ್ ಆಡ ಬಯಸುವ ಒಬ್ಬರಿಗೆ 100 ರೂ. ಟಿಕೆಟ್ ನಿಗದಿ ಮಾಡಲಾಗಿದೆ. ದಿನಕ್ಕೆ ಸರಿ ಸುಮಾರು 50 ರಿಂದ 60 ಜನ ಕ್ರೀಡಾಸಕ್ತರು ಇಲ್ಲಿಗೆ ಬರ್ತಿದ್ದಾರೆ. ಇದು ಆರಂಭಿಕ ಹಂತವಾಗಿದ್ದು, ಸಂಪೂರ್ಣ ಅನ್ ಲಾಕ್ ಆದ ಬಳಿಕ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ಕೊಡುವ ಸಾಧ್ಯತೆ ಇದೆ ಅಂತಾರೆ ಜಿಎಫ್ಓ ರಾಜು ಗೊಂಡಕರ್.
ಜಿಪ್ ಲೈನ್ ಆಡಲು ಎಲ್ಲಾ ರೀತಿಯ ರಕ್ಷಣಾ ಸಲಕರಣೆಗಳನ್ನು ನೀಡಲಾಗುತ್ತದೆ. ಜೊತೆಗೆ ಅಲ್ಲಿ ಯಾವ ರೀತಿ ಆಡಬೇಕು ಎಂಬ ಬಗ್ಗೆ ಮಾಹಿತಿ ನೀಡಲು ನುರಿತ ತರಬೇತಿದಾರರನ್ನು ನೇಮಿಸಲಾಗಿದೆ. ಒಟ್ಟಿನಲ್ಲಿ ಬಿಂಕದಕಟ್ಟೆಯ ಜಿಪ್ ಲೈನ್, ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಬರುವ ಪ್ರವಾಸಿಗರಿಗೆ ಒಂದೊಳ್ಳೆಯ ಮನೋರಂಜನೆ ಕೊಡುವ ಹಾಟ್ ಸ್ಪಾಟ್ ಆಗಿ ಬದಲಾಗಿದೆ.