ಗದಗ: ಜಿಲ್ಲಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಳಿಸಿದ್ದಲ್ಲದೇ, ಸಾಕಷ್ಟು ಅವಾಂತರ ಉಂಟಾಗಿವೆ. ಅಕಾಲಿಕ ಮಳೆ ಜನರ ಜೀವಕ್ಕೆ ಕುತ್ತು ತರುತ್ತಿದೆ.
ಉಪ್ಪಿನ ಬೆಟಗೇರಿಯಯಲ್ಲಿ ಕನ್ಯೆ ನೋಡಿ ಮರಳಿ ಊರಿಗೆ ಬರುತ್ತಿದ್ದ ಮುಂಡರಗಿ ತಾಲೂಕಿನ ಯಕ್ಲಾಸಪುರ ಗ್ರಾಮದ ಟಿಪ್ಪುಸುಲ್ತಾನ್ (26) ಎಂಬ ಯುವಕ ಹಳ್ಳ ದಾಟುವ ವೇಳೆ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿ ಸಾವಿಗೀಡಾಗಿದ್ದಾನೆ. ಟಿಪ್ಪುಸುಲ್ತಾನ್ ಗುರುವಾರ ಕನ್ಯೆ ನೋಡಲು ಉಪ್ಪಿನ ಬೆಟಗೇರಿಗೆ ಹೋಗಿದ್ದ. ಕನ್ಯೆ ನೋಡಿ ವಾಪಸ್ ಬರುವಷ್ಟೊತ್ತಿಗೆ ಸಂಜೆಯಾಗಿದೆ.
ಹಾಗಾಗಿ ಉಪ್ಪಿನ ಬೆಟಗೇರಿಯಿಂದ ಮುಂಡರಗಿವರೆಗೆ ಬಂದು ಯಕ್ಲಾಸಪುರದಲ್ಲಿ ಮಳೆ ಬರುತ್ತಿರುವ ಬಗ್ಗೆ ತಂದೆಗೆ ಕರೆ ಮಾಡಿ ಕೇಳಿದ್ದನಂತೆ . ಆಗ ಟಿಪ್ಪು ತಂದೆ ಇಲ್ಲಿ ತುಂಬಾ ಮಳೆ ಬರುತ್ತಿದೆ. ಇವತ್ತು ಬರಬೇಡ, ಇವತ್ತೊಂದಿನ ಮುಂಡರಗಿಯಲ್ಲಿದ್ದು, ಶುಕ್ರವಾರ ಬೆಳಗ್ಗೆ ಎದ್ದು ಬಾ ಎಂದು ಹೇಳಿದ್ದರಂತೆ.
ತಂದೆಯ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದೇ ನಿರಂತರ ಸುರಿಯುತ್ತಿರುವ ಮಳೆಗೆ ಯಕ್ಲಾಸಪುರದ ಕೋತಿ ಹಳ್ಳ ಮೈದುಂಬಿ ಹರಿಯುತ್ತಿದ್ದರೂ ಟಿಪ್ಪು ಬೈಕ್‌ನಲ್ಲಿ ಹಳ್ಳ ದಾಟುವ ದುಸ್ಸಾಹಸಕ್ಕೆ ಮುಂದಾಗಿದ್ದಾನೆ. ಈ ವೇಳೆ, ನೀರಿನ ರಭಸಕ್ಕೆ ಸಿಲುಕಿ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ.
ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಎಎಸ್‌ಐ ಮಾರುತಿ ಜೋಗಂದಂಡಕರ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಎರಡು ವರ್ಷವಾದರೂ ಬಾರದ ಯುದ್ಧ ವಿಮಾನ : ವಸ್ತುಸಂಗ್ರಹಾಲಯ ನಿರ್ಮಾಣದಲ್ಲಿ ವಿಳಂಬ