ಗದಗ: ಮದ್ಯವ್ಯಸನಿಗಳಿಂದ ನಮ್ಮ ಊರಿಗೆ ಕೊರೊನಾ ಸೋಂಕು ತಗುಲುವ ಭೀತಿ ಇದೆ. ಕೂಡಲೇ ವೈನ್ ಶಾಪ್ಗಳನ್ನು ಮುಚ್ಚಬೇಕು ಎಂದು ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ಮಹಿಳೆಯರು ರಸ್ತೆಗಿಳಿದು ಪ್ರತಿಭಟನೆ ನಡೆದರು.
ಮಹಿಳೆಯರ ಹೋರಾಟಕ್ಕೆ ಮಣಿದು ನಾಲ್ಕು ವೈನ್ ಶಾಪ್ಗಳಿಗೆ ಬೀಗ ಬಿದ್ದಿದೆ. ಕೊರೊನಾ ಹಾಟ್ ಸ್ಪಾಟ್ ಆಗಿರುವ ಬಾಗಲಕೋಟೆ ಜಿಲ್ಲೆಯ ಡಾಣಕ ಶಿರೂರ ಗ್ರಾಮ ಇಲ್ಲಿಗೆ ತುಂಬಾ ಹತ್ತಿರವಿದೆ. ಇದರಿಂದ ಗ್ರಾಮಕ್ಕೆ ಕೊರೊನಾ ಸೋಂಕು ತಗುಲುವ ಆತಂಕವಿದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಮಹಿಳೆಯರು ಆಗ್ರಹಿಸಿದರು.
ಮದ್ಯ ಮಾರಾಟ ನಿಷೇಧವಿದ್ದಾಗ ಗ್ರಾಮಸ್ಥರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಅನುಮತಿ ನೀಡಿದಾಗಿನಿಂದ ಕಿರಿಕಿರಿ ಆರಂಭವಾಗಿದೆ. ಮದ್ಯ ಸೇವಿಸಿ ಮಡದಿಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ದೂರಿದರು.