ಗದಗ: ಚಿತ್ರ ನಟಿ ರಾಗಿಣಿ ಸೇರಿದಂತೆ ಸಮಾಜಘಾತುಕ ಶಕ್ತಿ ಯಾವುದೇ ಇರಲಿ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬೈರತಿ ಬಸವರಾಜ್ ಗದಗದಲ್ಲಿ ಹೇಳಿದ್ದಾರೆ.
ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ ಡ್ರಗ್ಸ್ ಮಾಫಿಯಾ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ಮುಖಮಂತ್ರಿ ಹಾಗೂ ಗೃಹ ಸಚಿವರು ವಿಶೇಷ ಕಾಳಜಿ ವಹಿಸಿದ್ದಾರೆ. ಇದರಲ್ಲಿ ಯಾರ್ಯಾರು ಇದ್ದಾರೆ ಎನ್ನುವ ಪತ್ತೆ ಕಾರ್ಯ ನಡೆಯುತ್ತಿದೆ. ಬಿಜೆಪಿ ಸರ್ಕಾರ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸುತ್ತದೆ. ರಾಗಿಣಿ ವಿಚಾರದಲ್ಲಿ ಯಾವ ನಾಯಕರ ಕೈವಾಡವಿದೆ ಎಂಬುದು ಗೊತ್ತಿಲ್ಲ. ರಾಗಿಣಿಗೆ ಸಹಾಯ ಮಾಡುವ ಸಮಯ ನಮಗೆ ಬಂದಿಲ್ಲ. ಡ್ರಗ್ಸ್ನಲ್ಲಿ ಯಾವುದೇ ರಂಗದವರಿದ್ದರೂ ಕ್ರಮ ಜರುಗಿಸುತ್ತೇವೆ. ಯಾರೇ ಇರಲಿ, ಎಷ್ಟೇ ದೊಡ್ಡವರು ಇರಲಿ ಉಪ್ಪು ತಿಂದವರು ನೀರು ಕುಡಿಯಲೆ ಬೇಕು ಎಂದು ಹೇಳಿದ್ದಾರೆ.
ಇನ್ನು ರಾಜ್ಯ ಸರ್ಕಾರದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಪುತ್ರರ ಹಸ್ತಕ್ಷೇಪ ವಿಚಾರವಾಗಿ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಅಧಿಕಾರದಲ್ಲಿ ಯಾರು ಹಸ್ತಕ್ಷೇಪ ಮಾಡುತ್ತಿಲ್ಲ. ಏಳೆಂಟು ತಿಂಗಳಿಂದ ನಾನು ಕೂಡಾ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಇನ್ನು ಹೋರಾಟದ ಹಾದಿಯಿಂದ ಬಂದವರು, ಸಾಕಷ್ಟು ಅನುಭವ ಇರುವ ಮುಖ್ಯಮಂತ್ರಿ ಅವರಿಗೆ ಇನ್ನೊಬ್ಬರಿಂದ ಹೇಳಿಸಿಕೊಂಡು ಕೆಲಸ ಮಾಡುವ ಅವಶ್ಯಕತೆ ಅವರಿಗೆ ಇಲ್ಲ. ಮಕ್ಕಳ ಕಡೆಯಿಂದ ಹೇಳಿಸಿಕೊಂಡು ಕೆಲಸ ಮಾಡುವ ಅವಶ್ಯಕತೆ ಅವರಿಗೆ ಬಂದಿಲ್ಲ ಎಂದರು.
ಇನ್ನು ಅವರಿಗೆ ವಯಸ್ಸು, ಅನುಭವ ಸಾಕಷ್ಟು ಇದೆ. ರಾಜಕೀಯವಾಗಿ ಕೆಲವು ಕಾಣದ ಕೈಗಳು ಈ ಕೆಲಸ ಮಾಡುತ್ತಾಯಿದ್ದಾರೆ ಅದಕ್ಕೆ ಯಾವುದೇ ಸಾಕ್ಷಿ ಆಧಾರಗಳು ಇಲ್ಲ ಎಂದು ಹೇಳಿದರು.