ಗದಗ: 2ಎ ಮೀಸಲಾತಿಗಾಗಿ ಲಿಂಗಾಯತ ಪಂಚಮಸಾಲಿ ಸಮುದಾಯದ ಪ್ರತಿಜ್ಞಾ ಪಂಚಾಯತ ಅಭಿಯಾನ ವಿಚಾರವಾಗಿ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಪ್ರತಿಕ್ರಿಯಿಸಿದ್ದಾರೆ. ಕೆಲವು ಹೋರಾಟದ ವಿರೋಧಿಗಳು, ಆ ಭಾಗದ ನಾಯಕರು ಅಭಿಯಾನ ನಡೆಯಲ್ಲ ಅಂತ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಾಳೆ ಜಮಖಂಡಿಯಲ್ಲಿ ನಡೆಯುವ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ವಿಜಯಾನಂದ ಕಾಶಪ್ಪನವರ ಬರುವುದಿಲ್ಲ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಕೆಲವರು ಚಾಲೆಂಜ್ ಮಾಡಿದ್ದಾರೆ. ಕಲ್ಲಿನಿಂದ ಹೊಡೆಸುತ್ತೇವೆ ಎಂದಿದ್ದಾರೆ. ತಾಕತ್ತಿದ್ದರೆ ಹೊಡೆಸಲಿ. ನಾಳೆ ಮಧ್ಯಾಹ್ನ 3 ಗಂಟೆಗೆ ಜಮಖಂಡಿ ಪಟ್ಟದಲ್ಲಿ ಅಭಿಯಾನ ನಡೆದೇ ನಡೆಯುತ್ತೆ. ಯಾರು ತಡೆಯುತ್ತಾರೋ ನೋಡೋಣ ಎಂದು ಹೇಳಿದ್ದಾರೆ.
ಕೂಡಲಸಂಗಮ ಪಂಚಮಸಾಲಿ ಪೀಠದ ಆಸ್ತಿ ಖಾಸಗಿ ಬಳಕೆ ವಿಚಾರವಾಗಿ ಪಂಚಮಸಾಲಿ ಪೀಠದ ಟ್ರಸ್ಟ್ ಅಧ್ಯಕ್ಷ ಪ್ರಬಣ್ಣ ಹುಣಸಿಕಟ್ಟಿ ವಿರುದ್ಧ ಕಾಶಪ್ಪನವರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪೀಠದ ಆಸ್ತಿ ಟ್ರಸ್ಟ್ ಅಧ್ಯಕ್ಷ ಪ್ರಬಣ್ಣ ವಯಕ್ತಿಕ ಹೆಸರಿನಲ್ಲಿ ಯಾಕೆ ಇಟ್ಟುಕೊಂಡಿದ್ದಾರೆ. ಆಸ್ತಿ ಟ್ರಸ್ಟ್‌ಗೆ ಬಿಟ್ಟು ಕೊಡಲಿ. ಹತ್ತು ವರ್ಷವಾಯ್ತು ಯಾಕೆ ಬಿಟ್ಟು ಕೊಡುತ್ತಿಲ್ಲ. ಆಸ್ತಿ ಇಟ್ಕೊಂಡು ಸಚಿವ ನಿರಾಣಿ ಮಾತು ಕೇಳಿ ಆಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಚಮಸಾಲಿ ಸಮಾಜ ಒಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಮಾಜ ಒಗ್ಗಟ್ಟಾಗಿದೆ. ಯಾರೂ ಹೇಗೆ ಅಂತ ಸಮಾಜದ ಜನರಿಗೂ ಗೊತ್ತಿದೆ. ಪೀಠದ ಆಸ್ತಿ ವಯಕ್ತಿಕವಾಗಿ ಇಟ್ಟುಕೊಂಡಿದ್ದೇ ಸಮಸ್ಯೆಯಾಗಿದೆ. ಟ್ರಸ್ಟಿಗೆ ಆಸ್ತಿ ಬಿಟ್ಟುಕೊಡಲಿ. ನೂರು ಸಾರಿ ಪ್ರಬಣ್ಣಗೆ ಆಸ್ತಿ ಬಿಟ್ಟು ಕೊಡಲು ಹೇಳಿದ್ದೇವೆ. ಆದರೂ ಬಿಟ್ಟು ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಪಂಚಮಸಾಲಿ ಪೀಠದಿಂದ ಜಯಮೃತ್ಯುಂಜಯ ಶ್ರೀಗಳ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಮುರುಗೇಶ ನಿರಾಣಿ ತಾಕತ್ತಿದ್ರೆ ಪೀಠದಿಂದ ಶ್ರೀಗಳನ್ನು ಬದಲಾಯಿಸಲಿ ಎಂದು ವಾಗ್ದಾಳಿ ನಡೆಸಿದರು.
ಮುರುಗೇಶ ನಿರಾಣಿಗೆ ಹುಚ್ಚು ಹಿಡಿದಿದೆ. ತಲೆ ಕೆಟ್ಟಿದೆ ಅದಕ್ಕೆ ಮಾತಾಡ್ತಾರೆ. ಅಧಿಕಾರದ ವ್ಯಾಮೋಹದಿಂದ ಮಾತನಾಡುತ್ತಿದ್ದಾರೆ. ಪೀಠ ಮಾಡಿದ್ದು ಸಮಾಜದ ಜನರು. ಯಾರೂ ಒಡೆಯಲು ಸಾಧ್ಯವಿಲ್ಲ. ತಾಕತ್ತಿದ್ರೆ ಒಡೆದು ತೋರಿಸಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಸಮಾಜ ಸಂಘಟನೆ ಆದ ಮೇಲೆ ಅಧಿಕಾರ ಪಡೆದವರು ಇವರು ನಿನ್ನೆ ಮೊನ್ನೆ ಬಂದು ಅಧಿಕಾರಕ್ಕಾಗಿ ಸಮಾಜ ಉಪಯೋಗಿಸಿಕೊಂಡಿದ್ದಾರೆ. ಅಧಿಕಾರ ಮಾತ್ರ ಬೇಕು ಸಮಾಜ ಬೇಡ. ಸಮಾಜಕ್ಕೆ ನ್ಯಾಯ ಕೊಡಿಸುವ ಮನಸ್ಸು ಇಲ್ಲ. ಏನ್ ಮಾಡ್ತಾರೆ ನೋಡೋಣ. ಜಯಮೃತ್ಯುಂಜಯ ಶ್ರೀಗಳೇ ಪೀಠದಲ್ಲಿ ಇರುತ್ತಾರೆ ಎಂದಿದ್ದಾರೆ.