ಗದಗ: ಬಗರ್ ಹುಕುಂ ರೈತರು ಹಾಗೂ ಅರಣ್ಯ ಇಲಾಖೆ ನಡುವೆ ಸಂಘರ್ಷ ನಡೆದಿದ್ದು, ಮನನೊಂದು ಇಬ್ಬರು ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಕೇಲೂರು ಗ್ರಾಮದಲ್ಲಿ ನಡೆದಿದೆ.
ಕೇಲೂರು ಗ್ರಾಮದಲ್ಲಿ ಸುಮಾರು 7 ಜನ ರೈತರು ಸುಮಾರು 8 ಎಕರೆ ಜಮೀನಿನಲ್ಲಿ ಹಲವು ದಶಕಗಳಿಂದ ಉಳುಮೆ ಮಾಡುತ್ತಾ ಬರುತ್ತಿದ್ದಾರೆ. ಆದರೆ ಕಳೆದ ಹಲವು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ, ಇದು ಇಲಾಖೆಗೆ ಸೇರಿದ ಜಮೀನು ಎಂದು ಹೇಳಿ ಭೂಮಿ ವಶಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಇಂದು ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸ್ ಬಂದೋಬಸ್ತ್ನಲ್ಲಿ ಜಮೀನು ವಶಪಡಿಸಿಕೊಂಡು ಟ್ರೆಂಚ್ ಹಾಕಲು ಮುಂದಾಗಿದ್ದರು. ಆಗ ರೈತರು ಹಾಗೂ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. ಮಹಿಳೆಯರು ಜಮೀನನ್ನು ವಶಪಡಿಸಿಕೊಳ್ಳದಂತೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಲಿಲ್ಲ. ಇದರಿಂದ ಮನನೊಂದ ಸರೋಜವ್ವ ಶಾಂತಗೌಡ ಪಾಟೀಲ್, ನಿರ್ಮಲಾ ರಾಮನಗೌಡ ಪಾಟೀಲ್ ಎಂಬ ಮಹಿಳೆಯರು ಅಧಿಕಾರಿಗಳೆದುರೇ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.
ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರೂ ಅರಣ್ಯ ಇಲಾಖೆ ಸಿಬ್ಬಂದಿ ಮೂಕಪ್ರೇಕ್ಷಕರಂತೆ ನೋಡುತ್ತಿದ್ದರು. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ಸೇರಿಸಲು ಆಂಬ್ಯುಲೆನ್ಸ್ಗೆ ಕರೆ ಮಾಡಿದರೂ ಆಂಬ್ಯುಲೆನ್ಸ್ ವಾಹನ ಸ್ಥಳಕ್ಕೆ ಬರದಂತೆ ಅಡ್ಡಿಪಡಿಸಿದರು. ಅಲ್ಲದೆ ಜೆಸಿಬಿ ಮೂಲಕ ಜಮೀನಿನಲ್ಲಿ ಬೆಳೆದಿದ್ದ ಬೆಳೆ ನಾಶಪಡಿಸಿ ನಮ್ಮನ್ನು ಬೀದಿಯಲ್ಲಿ ನಿಲ್ಲಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸರ್ಕಾರದ ಕೆಲಸ ಮಾಡಲು ನಾವು ಹೋದರೆ ನಮಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಕಂದಾಯ ಜಮೀನು ಆಗಿದ್ರೆ ಬಿಡುತ್ತೇವೆ. ಅರಣ್ಯ ಇಲಾಖೆ ಜಾಗವನ್ನು ನಾವು ವಶಕ್ಕೆ ಪಡೆಯುತ್ತಿದ್ದೇವೆ ಎಂದು ಗದಗ ಡಿಎಫ್‌ಓ ಅಧಿಕಾರಿಗಳು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಮುಂಡರಗಿ, ಶಿರಹಟ್ಟಿ ತಾಲೂಕಿನ 50ಕ್ಕೂ ಅಧಿಕ ಗ್ರಾಮಗಳ ಬಗರ್ ಹುಕುಂ ಹಿಡುವಳಿದಾರರು ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದರು.
ಇದನ್ನೂ ಓದಿ: ಮೈಸೂರು ರೈಲ್ವೆ ಕ್ವಾರ್ಟರ್ಸ್ನಲ್ಲಿ ಕ್ಲೋರಿನೇಷನ್ ಸೋರಿಕೆ: 5ಕ್ಕೂ ಹೆಚ್ಚು ಮಂದಿ ಅಸ್ವಸ್ಥ