ಗದಗ: ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನವೀಕೃತ ಬಸ್ ನಿಲ್ದಾಣವನ್ನು ಇಂದು ಸಂಜೆ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರು ಉದ್ಘಾಟಿಸಲಿದ್ದಾರೆ. ಆದರೆ ಸಮಾರಂಭಕ್ಕೆ ಕಲ್ಲಯ್ಯಜ್ಜನವರು ಮತ್ತು ತೋಂಟದ ಶ್ರೀಗಳನ್ನು ಆಹ್ವಾನಿಸದೇ ಇರುವುದು ಭಕ್ತರ ಬೇಸರಕ್ಕೆ ಕಾರಣವಾಗಿದೆ.
ನಗರದಲ್ಲಿ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿ ಸುಮಾರು ವರ್ಷಗಳೇ ಕಳೆದಿದ್ದು, ನಿಲ್ದಾಣಕ್ಕೆ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಅವರ ಹೆಸರನ್ನು ಇಡಲಾಗಿದೆ. ನಿರಂತರ ಹೋರಾಟದ ಫಲವಾಗಿ ಇಂದು ಬಸ್ ನಿಲ್ದಾಣ ಉದ್ಘಾಟನೆಗೊಳ್ಳುತ್ತಿರುವುದು ಹಲವು ಸಂಘಟನೆಗಳಿಗೆ ಸಂತಸ ತಂದಿದೆ.
ಓದಿ: ಎಫ್ಡಿಐ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಬಂಧಿತರ ಸಂಖ್ಯೆ 14ಕ್ಕೆ ಏರಿಕೆ
ಬಸ್ ನಿಲ್ದಾಣದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹಾಗೂ ತೋಂಟದಾರ್ಯ ಮಠದ ಸಿದ್ದರಾಮ ಮಹಾಸ್ವಾಮೀಜಿಗಳಿಗೆ ಜಿಲ್ಲಾಡಳಿತ ಆಹ್ವಾನ ನೀಡಿಲ್ಲ. ಸ್ವಾಮೀಜಿಗಳನ್ನು ಸಮಾರಂಭಕ್ಕೆ ಕರೆಯದೆ ಅಧಿಕಾರಿಗಳು ಅಪಮಾನ ಮಾಡಿದ್ದಾರೆ ಎಂದು ಉಭಯ ಮಠಗಳ ಭಕ್ತರು ಆಕ್ರೋಶ ವ್ಯಕ್ತಪಡಿಸಿರುವ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪುಟ್ಟಯ್ಯಜ್ಜನವರ ಬಸ್ ನಿಲ್ದಾಣ ಲೋಕಾರ್ಪಣೆಗೆ ಅದೇ ಮಠದ ಪೀಠಾಧಿಪತಿಗಳನ್ನು ಆಹ್ವಾನಿಸದಿರುವುದು ಎಷ್ಟು ಸರಿ ಎಂದು ಜಿಲ್ಲೆಯ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.