ಗದಗ: ರೋಣ ತಾಲೂಕಿನ ಕೃಷ್ಣಾಪುರದ ಕೊರೊನಾ ಸೋಂಕಿತ ಗರ್ಭಿಣಿ ಮಹಿಳೆಗೆ ಸಂಪ್ರದಾಯದಂತೆ ನೆರೆ ಮನೆಯವರು ಊಟ ಹಾಕಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
607ನೇ ರೋಗಿ 25 ವರ್ಷದ ಗರ್ಭಿಣಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ರೋಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಐದು ದಿನಗಳ ಹಿಂದೆ ತನ್ನ ಗಂಡನ ಮನೆ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಡಾಣಕಶಿರೂರ ಗ್ರಾಮದಿಂದ ಗದಗ ಜಿಲ್ಲೆಯ ರೋಣ ತಾಲೂಕಿನ ಕೃಷ್ಣಾಪುರದ ತವರು ಮನೆಗೆ ಬಂದಿದ್ದಳು.
ಸಂಪ್ರದಾಯದಂತೆ ನೆರೆ ಮನೆಯವರು ಮತ್ತು ಪರಿಚಯದ ಕುಟುಂಬಸ್ಥರು ಆಕೆಗೆ ಸಿಹಿ ಅಡುಗೆ ಮಾಡಿಸಿ ಉಣಬಡಿಸಿದ್ದರು. ಆದರೆ ಈಗ ಗರ್ಭಿಣಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕೃಷ್ಣಾಪುರ ಗ್ರಾಮದ ಮನೆ ಮನೆಗೂ ಹೆಮ್ಮಾರಿ ಕೊರೊನಾ ಭಯ ಕಾಡ್ತಿದೆ. ಇನ್ನೊಂದೆಡೆ ಈಗಾಗಲೇ ರೋಣ ಪಟ್ಟಣದ ಎರಡು ಖಾಸಗಿ ಆಸ್ಪತ್ರೆಯಲ್ಲಿ ಗರ್ಭಿಣಿ ಚಿಕಿತ್ಸೆ ಪಡೆದಿದ್ದಳು. ಗರ್ಭಿಣಿಗೆ ಚಿಕಿತ್ಸೆ ನೀಡಿದ ವೈದ್ಯರು ಅದೆಷ್ಟು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೋ ಗೊತ್ತಿಲ್ಲ ಎನ್ನಲಾಗಿದೆ. ಹಾಗಾಗಿ ರೋಣ ತಾಲೂಕಿನಲ್ಲಿ ಹೆಜ್ಜೆ ಹೆಜ್ಜೆಗೂ ಭಯ ಕಾಡುತ್ತಿದೆ.