ಗದಗ: ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಾಟೆ ಪ್ರಕರಣಕ್ಕೂ ಕಾಂಗ್ರೆಸ್ ಪಕ್ಷಕ್ಕೂ ನಿಕಟ ಸಂಬಂಧ ಇದೆ ಎಂದು ಸಚಿವ ಸಿ.ಸಿ.ಪಾಟೀಲ್ ಆರೋಪಿಸಿದ್ದಾರೆ.
ಗದಗ ನಗರದಲ್ಲಿ ಮಾತನಾಡಿದ ಸಚಿವ ಸಿ.ಸಿ.ಪಾಟೀಲ್, ಬೆಂಗಳೂರಿನಲ್ಲಿ ನಡೆದ ಗಲಭೆ ಪೂರ್ವನಿಯೋಜಿತ ಸಂಚಾಗಿದೆ. ಕೇವಲ ಒಂದು ವಾಟ್ಸ್ಆ್ಯಪ್ ಮೆಸೇಜ್ನಿಂದ ಎರಡರಿಂದ ಮೂರು ಸಾವಿರ ಜನರು ಸೇರಿದ್ದಾರೆ ಅಂದ್ರೆ ಅದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ರು. ಇದೊಂದು ಪೂರ್ವನಿಯೋಜಿತ ಸಂಚಾಗಿದ್ದು, ಇಷ್ಟೆಲ್ಲಾ ಗಲಾಟೆ, ಹಿಂಸಾಚಾರ ನಡೆದರೂ ಕಾಂಗ್ರೆಸ್ ಪಕ್ಷ ಖಂಡಿಸುತ್ತಿಲ್ಲಾ ಯಾಕೆ ಅಂತ ಪ್ರಶ್ನಿಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರ ಪಿಎಫ್ಐ ಹಾಗೂ ಎಸ್ಡಿಪಿಐ ಸಂಘಟನೆ ಕಾರ್ಯಕರ್ಯರ ಮೇಲೆ ಇದ್ದ ಹಲವು ಕೇಸ್ಗಳನ್ನ ಹಿಂದಕ್ಕೆ ತೆಗೆದುಕೊಂಡಿದೆ. ಕಾಂಗ್ರೆಸ್ ಪಕ್ಷಕ್ಕೂ ಹಾಗೂ ಈ ಭಯೋತ್ಪಾದನೆಗೆ ನಿಕಟವಾದ ಸಂಪರ್ಕವಿದೆ ಎಂದು ಆರೋಪ ಮಾಡಿದ್ರು.
ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ತರಬೇಕು ಎನ್ನುವುದೇ ಕಾಂಗ್ರೆಸ್ ಪಕ್ಷದವರ ಉದ್ದೇಶವಾಗಿದೆ. ಸಂಘಟನೆಗಳ ನಿಷೇಧ ಕುರಿತು ಕ್ಯಾಬಿನೆಟ್ ಮೀಟಿಂಗ್ನಲ್ಲಿ ನಿರ್ಧಾರವಾಗುತ್ತದೆ. ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಿದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂಬುದರ ಬಗ್ಗೆ ಚರ್ಚೆ ನಡೆಯಲಿದೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.