ಗದಗ: ಎತ್ತು ಮತ್ತು ಅದರ ಮಾಲೀಕ ಒಂದೇ ದಿನ ಮೃತಪಟ್ಟ ಘಟನೆ ಗದಗ ತಾಲೂಕಿನ ಬೆನಕನಕೊಪ್ಪದಲ್ಲಿ ಗುರುವಾರ ನಡೆದಿದೆ. ಅಕಾಲಿಕವಾಗಿ ಮಾಲೀಕ ಭೀಮಪ್ಪ ಕಣಗಿನಹಾಳ (90) ಮರಣ ಹೊಂದಿದ್ದರು. ಬಳಿಕ ಕೆಲವೇ ಗಂಟೆಗಳಲ್ಲಿ ಕೃಷಿ ಕಾರ್ಯದಲ್ಲಿ ರೈತನ ಜೊತೆಗಿದ್ದ ಪ್ರೀತಿಯ ಎತ್ತು ಕೂಡ ಕೊನೆಯುಸಿರೆಳೆದಿದೆ.
ಮಾಲೀಕನ ಸಾವಿನ ಬೆನ್ನಲ್ಲೇ ಎತ್ತು ಸಾವನ್ನಪ್ಪಿರುವ ಘಟನೆ ಕಂಡು ಗ್ರಾಮಸ್ಥರು ಮಮ್ಮಲ ಮರುಗಿದರು. ಮನಕಲಕುವ ಘಟನೆ ಕಂಡು ಸುತ್ತಮುತ್ತಲಿನ ಗ್ರಾಮಸ್ಥರು ಕೂಡ ಕಣ್ನೀರಿಟ್ಟರು. ಭೀಮಪ್ಪನ ಜಮೀನಿನಲ್ಲಿ ಅಕ್ಕ-ಪಕ್ಕ ಸಮಾಧಿ ಮಾಡಿ ಲಿಂಗಾಯತ ವಿಧಿವಿಧಾನದಂತೆ ರೈತ ಭೀಮಪ್ಪ ಮತ್ತು ಅವರ ಎತ್ತಿನ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮನಕಲಕುವ ಅಂತ್ಯಸಂಸ್ಕಾರಲ್ಲಿ ಬೆನಕನಕೊಪ್ಪ ಸೇರಿದಂತೆ ಹಲವಾರು ಗ್ರಾಮಸ್ಥರು ಭಾಗಿಯಾಗಿದ್ದರು.
ಈ ಹಿಂದೆ ಅಪ್ಪ-ಮಗ, ತಾಯಿ-ಮಗ, ಗಂಡ-ಹೆಂಡತಿ ಸಾವಿನಲ್ಲೂ ಒಂದಾದ ಘಟನೆಗಳು ನಡೆದಿದ್ದವು. ಇದೀಗ ಗದಗದಲ್ಲಿ ಮಾಲೀಕನ ಜೊತೆ ಎತ್ತು ಕೂಡ ಸಾವನ್ನಪ್ಪಿರುವುದು ಮನಕಲಕುವಂತಿದೆ.
ಮೊದಲೇ ಸಮಾಧಿ ತೋಡಿ, ಅದರಲ್ಲೇ ಮಣ್ಣಾದ ಅಜ್ಜ: ಸಾವಿನಲ್ಲೂ ವೃದ್ಧರೊಬ್ಬರು ಮಾದರಿಯಾದ ಘಟನೆ ಕಲಬುರಗಿಯಲ್ಲಿ ಗುರುವಾರ ವರದಿಯಾಗಿದೆ. ಕಲಬುರಗಿಯ ಸಿದ್ದಪ್ಪ ಎಂಬ ವೃದ್ಧರೊಬ್ಬರು ತಾನು ಯಾರಿಗೂ ಹೊರೆಯಾಗಬಾರೆಂಬ ಕಾರಣಕ್ಕೆ 15 ವರ್ಷಗಳ ಮೊದಲೇ ಸಮಾಧಿಗೆ ಗುಂಡಿ ತೋಡಿದ್ದರು. ನಿತ್ಯ ಹೊಲದ ಕೆಲಸಕ್ಕೆಂದು ಹೋದಾಗ ಕೊಂಚ ಸಮಯ ಮೀಸಲಿಟ್ಟು ಖುದ್ದು ತಾವೊಬ್ಬರೇ ಅಕ್ಕಪಕ್ಕದಲ್ಲಿ ತಮಗೂ ಮತ್ತು ತಮ್ಮ ಹೆಂಡತಿಗಾಗಿ ಎರಡು ಸಮಾಧಿಗಳನ್ನು ತೋಡಿದ್ದರು. ಇದೀಗ ಅವರು ವಯೋಸಹಜ ಮರಣ ಹೊಂದಿದ್ದು ಅವರನ್ನು ಕುಟುಂಬಸ್ಥರು ಅದೇ ಗುಂಡಿಯಲ್ಲಿ ಸಮಾಧಿ ಮಾಡಿದ್ದಾರೆ. ಅವರ ಪತ್ನಿ 6 ವರ್ಷದ ಹಿಂದೆಯೇ ಮರಣ ಹೊಂದಿದ್ದು, ಅವರ ಮೃತ ದೇಹವನ್ನು ಕೂಡ ಸಿದ್ದಪ್ಪ ತೋಡಿದ್ದ ಗುಂಡಿಯಲ್ಲಿ ಸಮಾಧಿ ಮಾಡಿದ್ದರು. ಈಗ ಹೆಂಡತಿ ಪಕ್ಕವೇ ಪತಿ ಸಿದ್ದಪ್ಪನವರನ್ನು ಸಮಾಧಿ ಮಾಡಲಾಗಿದೆ.
ಓಂದೇ ದಿನ ಸಂಗೀತದ ಸ್ವರ ನಿಲ್ಲಿಸಿದ ಸಹೋದರರು: ಉಡುಪಿಯಲ್ಲಿ ಕಳೆದ ಫೆಬ್ರವರಿಯಲ್ಲಿ ಅಣ್ಣ ತಮ್ಮ ಇಬ್ಬರು ಸಾವಿನಲ್ಲಿ ಒಂದಾದ ಘಟನೆ ನಡೆದಿತ್ತು. ರಾಘವೇಂದ್ರ ಮೋನ ಹಾಗು ಗಣೇಶ ದೇವಾಡಿಗ ಮೃತಪಟ್ಟಿರುವ ಸಹೋದರರು. ಇಬ್ಬರು ವಾದ್ಯ ಸಂಗೀತದಲ್ಲಿ ಪ್ರಸಿದ್ಧರಾಗಿದ್ದರು. ಇವರಿಬ್ಬರು ಓಂದೇ ಮನೆಯಲ್ಲಿ ವಾಸವಾಗಿದ್ದರು. ರಾಘವೇಂದ್ರ ಮೋನ ಎನ್ನುವವರು ಸಾಯುವ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕೊನೆಗೆ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವಿಗೀಡಾಗಿದರು. ಇದರ ಸುದ್ದಿ ಕೇಳಿದ ಅವರ ಸಹೋದರ ಗಣೇಶ್ ದೇವಾಡಿಗ ಅದೇ ದಿನ ಮಧ್ಯಾಹ್ನ ಮೃತಪಟ್ಟಿದ್ದರು.