ಗದಗ: ರೈಲ್ವೆ ಫ್ಲೈ ಓವರ್ ಬ್ರಿಡ್ಜ್ ಕಾಮಗಾರಿ ವೇಳೆ ಪಿಲ್ಲರ್ ತುಂಡಾಗಿ ಮನೆ ಮೇಲೆ ಬಿದ್ದ ಪರಿಣಾಮ ಮನೆಯಲ್ಲಿ ಮಲಗಿದ್ದ ಹಸುಗೂಸು, ಬಾಣಂತಿ, ಗರ್ಭಿಣಿ ಮಹಿಳೆ ಬಚಾವ್ ಆಗಿರುವ ಘಟನೆ ನಗರದ ಅಂಬೇಡ್ಕರ್ ನಗರದ ಬಳಿ ನಡೆದಿದೆ.
ನಗರದ ಅಂಬೇಡ್ಕರ್ ನಗರದ ಬಳಿ ಕಳೆದ ಒಂದೂವರೆ ವರ್ಷದಿಂದ ರೈಲ್ವೇ ಫ್ಲೈ ಓವರ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದೆ. ಇಂದು ಬೃಹತ್ ಪಿಲ್ಲರ್ ಹಾಕುವಾಗ ಹೈಡ್ರಾ ಮೆಶಿನ್ ಪೈಪ್ ಕಟ್ ಆಗಿ ಮನೆ ಮೇಲೆ ಉರುಳಿದ ಪರಿಣಾಮ ಮನೆ ಜಖಂ ಆಗಿದೆ. ಗುತ್ತಿಗೆದಾರನ ಬೇಜವಾಬ್ದಾರಿಗೆ ಘಟನೆ ನೆನೆದು ಮಹಿಳೆಯರು ಕಣ್ಣೀರಿಡುತ್ತಿದ್ದಾರೆ. ಜಖಂ ಆದ ಕೋಣೆಯಲ್ಲೇ ಜೋಳಿಗೆಯಲ್ಲಿ ಮಲಗಿದ್ದ 8 ತಿಂಗಳ ಮಗು ಮಹಮ್ಮದ್, ಬಾಣಂತಿ ರೇಶ್ಮಾ, ಗರ್ಭಿಣಿ ಮಹಿಳೆ ಶಹನಾಜ್ ಬಚಾವ್ ಆಗಿದ್ದಾರೆ. ಅದೃಷ್ಟವಶಾತ್ ಮನೆಯಲ್ಲಿದ್ದ ಎರಡು ಕಪಾಟುಗಳು ಈ ಮೂವರ ಜೀವ ಉಳಿಸಿವೆ.
ಇಂತಹ ಅವಘಡ ನಡೆದರೂ ರೈಲ್ವೆ ಇಲಾಖೆಯ ಯಾವೊಬ್ಬ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಗದಗ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.