ಗದಗ: ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸಲು ಕಾನೂನಿನ ಮೊದಲ ಹಂತದ ಪ್ರಕ್ರಿಯೆ ಆರಂಭವಾಗಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ 2Aಗೆ ಸೇರಿಸುವುದು ಸಮಾಜದ ಬಹುದಿನಗಳ ಬೇಡಿಕೆಯಾಗಿದೆ. ಈ ಕುರಿತು 2ಎಗೆ ಸೇರಿಸಲು ಅಧ್ಯಯನ ಮಾಡಿ ವರದಿ ನೀಡುವಂತೆ ಸಿಎಂ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ ನೀಡಿದ್ದಾರೆ. ಆದಷ್ಟು ಬೇಗ ವರದಿ ನೀಡುವಂತೆ ತಂಡಕ್ಕೆ ಸೂಚಿಸುವಂತೆ ಸಿಎಂ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಇನ್ನು ಮಹಾರಾಷ್ಟ್ರ ಮಾದರಿಯಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಚಿಂತನೆ ಮಾಡಲಾಗಿದೆ. ಮಹಾರಾಷ್ಟ್ರದ ಮುಂಬೈ, ಪುಣೆ, ಸೊಲ್ಲಾಪುರದಲ್ಲಿ ಸಣ್ಣ ಕೈಗಾರಿಕೆಗಳು ಯಶಸ್ವಿಯಾಗಿವೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಜಾರಿ ಮಾಡಲು ಚಿಂತನೆ ನಡೆದಿದೆ. ಬಜೆಟ್ ನಂತರ ನಾನು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮಹಾರಾಷ್ಟ್ರ ಪ್ರವಾಸ ಮಾಡುತ್ತೇವೆ. ಅಲ್ಲಿಯ ಸಾಧಕ ಬಾಧಕಗಳನ್ನು ತಿಳಿದುಕೊಂಡು ನಮ್ಮಲ್ಲೂ ಅಭಿವೃದ್ಧಿ ಮಾಡುತ್ತೇವೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಜಾಗ ಖರೀದಿಸುವ ಪ್ರಕ್ರಿಯೆಯನ್ನು ಬಜೆಟ್ ನಂತರ ಆರಂಭ ಮಾಡುತ್ತೇವೆ ಎಂದು ಹೇಳಿದರು.