ಗದಗ: ಸ್ವಾತಂತ್ರ್ಯದ ನಂತರ ದೆಹಲಿಯಲ್ಲಿ ಇಂತಹ ಹಿಂಸೆ ಎಂದೂ ನಡೆದಿರಲಿಲ್ಲ. ಇದಕ್ಕೆ ಕಾರಣರಾದವರ ಮೇಲೆ ಎಫ್ಐಆರ್ ದಾಖಲಿಸಬೇಕಿತ್ತು. ಆದರೆ ಅದನ್ನೆಲ್ಲಾ ಬಿಟ್ಟು ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಚಿಕೆಗೇಡಿತನದ ಹೇಳಿಕೆ ನೀಡುತ್ತಾ ಬೇಜವಾಬ್ದಾರಿತನ ತೋರಿಸ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಹರಿಹಾಯ್ದಿದ್ದಾರೆ.
ಗದಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರೇಮಠ, ಕಪಿಲ್ ಮಿಶ್ರಾ, ಅನುರಾಗ ಠಾಕೋರ್, ಪರ್ವೇಶ ವರ್ಮಾ ಈ ಮೂರು ಜನರ ಮೇಲೆ ಎಫ್ಐಆರ್ ಹಾಕಬೇಕಿತ್ತು. ಹೈಕೋರ್ಟ್ ಸಹ ಈ ಪ್ರಶ್ನೆ ಮಾಡಿದೆ. ಇವರನ್ನ ಮೂಗುದಾರ ಹಾಕಿ ನಿಯಂತ್ರಣಕ್ಕೆ ತರುವ ಅಮಿತ್ ಶಾ ಮಾತ್ರ ಬೇಜವಾಬ್ದಾರಿ ಹೇಳಿಕೆ ನೀಡುತ್ತಾ ಕೂತಿದ್ದಾರೆ ಎಂದರು.
ಇಂದಿನ ಬಿಜೆಪಿ ಮುಖಂಡರ ಬಾಯಲ್ಲಿನ ಹೇಳಿಕೆಗಳು ದೆಹಲಿ ಉರಿಯುವಂತೆ ಮಾಡಿವೆ. ಬೆಂಕಿಯಲ್ಲಿ ಪೆಟ್ರೋಲ್ ಎಸೆದಂತೆ ಮಾಡಿವೆ. ಆದರೆ ಇದನ್ನೆಲ್ಲಾ ನಿಯಂತ್ರಣ ಮಾಡಬೇಕಾದ ಅಮಿತ್ ಶಾ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.
ಮಾನ ಮರ್ಯಾದೆ ಇದ್ದರೆ ತಕ್ಷಣ ಅಮಿತ್ ಶಾ ರಾಜಿನಾಮೆ ನೀಡಲಿ. ಯಾಕಂದ್ರೆ 25 ಜನ ದೆಹಲಿ ಗಲಭೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. 200 ಜನ ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ದಾರೆ. ಪೊಲೀಸರ ಗುಂಡೇಟು ಇವರೆಲ್ಲರ ಸಾವಿಗೆ ಕಾರಣವಾಗಿದೆ. ದೆಹಲಿ ಪೊಲೀಸರು ಗಲಭೆ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.