ಗದಗ: ಗದಗ ತಾಲೂಕಿನ ಮುಳಗುಂದ ಸಮೀಪದ ಬಸಾಪುರ ಗ್ರಾಮದಲ್ಲಿ 112 ಮನೆಗಳನ್ನು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸುತ್ತಿದೆ. ಸರ್ಕಾರದಿಂದ ಹೊಸ ಮನೆ ನಿರ್ಮಿಸ್ತಾರೆ ಅನ್ನೋ ಕಾರಣಕ್ಕೆ ಇದ್ದ ಹಳೆಯ ಮನೆಗಳನ್ನು ಬೀಳಿಸಿ ಗ್ರಾಮಸ್ಥರು ಜಾಗ ನೀಡಿದ್ರು. ಆದ್ರೆ 2019 ರಲ್ಲಿ ಕಾಮಗಾರಿ ಆರಂಭವಾಗಿದ್ರು ಕೂಡ ಕಾಮಗಾರಿ ಪೂರ್ಣಗೊಂಡಿಲ್ಲವೆಂದು ಜನರು ಅಳಲು ತೋಡಿಕೊಂಡಿದ್ದಾರೆ.
ಸದ್ಯ ನಿರ್ಮಾಣವಾಗಿರೋ ಅನೇಕ ಮನೆಗಳಿಗೆ ಕಿಟಕಿ, ಬಾಗಿಲು, ಶೌಚಾಲಯಗಳ ಸುಳಿವೇ ಇಲ್ಲ. ವಿದ್ಯುತ್, ನೀರಿನ ವ್ಯವಸ್ಥೆಯೂ ಆಗಿಲ್ಲ. ಕ್ಷೇತ್ರದ ಶಾಸಕ ಎಚ್.ಕೆ ಪಾಟೀಲ್, ಅಧಿಕಾರಿಗಳು, ಗುತ್ತಿಗೆದಾರರು ಇತ್ತ ಸುಳಿದಿಲ್ಲ. ಚುನಾವಣೆ ಬಂದಾಗ ಮಾತ್ರ ಓಡೋಡಿ ಬರುತ್ತಾರೆ, ಆದ್ರೆ ಕಷ್ಟದಲ್ಲಿದ್ದಾಗ ಇತ್ತ ತಿರುಗಿಯೂ ನೋಡುವುದಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಈಗಲಾದರೂ ನಮ್ಮ ಕಡೆ ಗಮನ ಹರಿಸಿ, ನಮ್ಮ ಸಮಸ್ಯೆಗೆ ಸ್ಪಂದಿಸಿ ಎಂಬುದು ಗ್ರಾಮಸ್ಥರ ಮನವಿ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 1,032 ಮನೆಗಳು ನಿರ್ಮಾಣವಾಗ್ತಿವೆ. ಮುಳಗುಂದ ಸಮೀಪದ ಬಸಾಪುರ ಗ್ರಾಮದಲ್ಲಿ 112 ಮನೆಗಳನ್ನು ನಿರ್ಮಿಸುವ ಉದ್ದೇಶವನ್ನ ಮಂಡಳಿ ಹೊಂದಿದೆ. ಮನೆ ನಿರ್ಮಾಣಕ್ಕೆ 5 ಲಕ್ಷ 14 ಸಾವಿರ ರೂಪಾಯಿ ವೆಚ್ಚ ತಗಲುತ್ತದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ 2 ಲಕ್ಷದ 70 ಸಾವಿರ ರೂಪಾಯಿ ಅನುದಾನ ಸಿಗಲಿದೆ. ಎಸ್.ಸಿ ಹಾಗೂ ಎಸ್.ಟಿ ಫಲಾನುಭವಿಗಳು 50 ಸಾವಿರ ಹಣವನ್ನು ಸರ್ಕಾರಕ್ಕೆ ತುಂಬಬೇಕು. ಇತರೆ ವರ್ಗದ ಫಲಾನುಭವಿಗಳು 77 ಸಾವಿರ ರೂಪಾಯಿಯನ್ನು ಸರ್ಕಾರಕ್ಕೆ ಭರಿಸಬೇಕಾಗುತ್ತದೆ. ಉಳಿದ 1 ಲಕ್ಷದ 67 ಸಾವಿರ ರೂ.ಅನ್ನು ಬ್ಯಾಂಕ್ ಲೋನ್ ಮಾಡಿಸಿಕೊಡಲಾಗುತ್ತೆ ಎನ್ನುವ ನಿಯಮವಿದೆ. ಆದ್ರೆ ಕೆಲ ಫಲಾನುಭವಿಗಳು ತಮ್ಮ ಪಾಲಿನ ಹಣ ತುಂಬಿಲ್ಲ. ಬ್ಯಾಂಕ್ ಲೋನ್ ಮಾಡಿಸುತ್ತಿಲ್ಲ. ಹೀಗಾಗಿ ಕಾಮಗಾರಿ ಪೂರ್ಣ ಆಗಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್ಸ್ಗೆ ಪೊಲೀಸ್ ಶಾಕ್.. ಪರಪ್ಪನ ಅಗ್ರಹಾರ ಜೈಲಿನ ಮೇಲೂ ದಾಳಿ
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಹಣ ಇಲ್ಲದೇ ಜನರು ಕಂಗಾಲಾಗಿದ್ದಾರೆ. ಬಾಡಿಗೆ ಮನೆಯಲ್ಲಿ ಇರಲಾಗದೆ ಅಪೂರ್ಣ ಕಾಮಗಾರಿಯಾಗಿರುವ ಮನೆಯಲ್ಲೇ ಜನರಿದ್ದಾರೆ. ಇನ್ನು ಕೆಲವರು ಊರು ಪಕ್ಕದ ಜಮೀನಿನಲ್ಲಿ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಇದೀಗ ಹೇಗಾದ್ರೂ ಮಾಡಿ ಮನೆ ಪೂರ್ಣಗೊಳಿಸಿ ಕೊಡಿ ಅಂತಾ ಅಂಗಲಾಚಿ ಬೇಡಿಕೊಳ್ಳುತ್ತಿದ್ದು, ಸರ್ಕಾರ ಇತ್ತ ಗಮನ ಹರಿಸಬೇಕಾಗಿದೆ.