ಗದಗ: ಗಡಿಯಲ್ಲಿ ದೇಶ ಕಾಯುವ ಯೋಧನೊಬ್ಬ ಗ್ರಾಮದ ಹೊರವಲಯದಲ್ಲಿರುವ ತಮ್ಮ ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ಕ್ವಾರಂಟೈನ್ ಆಗಿರೋ ಘಟನೆ ಇಲ್ಲಿನ ಅಂತೂರ ಬೆಂತೂರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ನಿವಾಸಿ ಯೋಧ ಪ್ರಕಾಶ್ ಹೈಗರ್ ಎಂಬುವರು ಅರುಣಾಚಲ ಪ್ರದೇಶದಲ್ಲಿ ‘ಇಂಡಿಯಾ-ಟಿಬೆಟ್’ ಗಡಿಯಲ್ಲಿ 49ನೇ ಬಟಾಲಿಯನ್ನಲ್ಲಿ ಕಳೆದ 14 ವರ್ಷಗಳಿಂದ ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜುಲೈ 2 ರಂದು ಅರುಣಾಚಲದಿಂದ ಹೊರಟ ಯೋಧ ಜುಲೈ 3ರಂದು ಗ್ರಾಮಕ್ಕೆ ಮರಳಿದ್ದಾರೆ. ಆದರೆ ಸರ್ಕಾರದ ನಿಯಮದಂತೆ ತಮ್ಮ ಕ್ವಾರಂಟೈನ್ ಅವಧಿ ಪೂರೈಸಲು ಸ್ವಯಂ ನಿರ್ಧಾರದಿಂದ ತಮ್ಮ ಸ್ವಂತ ಜಮೀನಿನಲ್ಲಿ ಟ್ರ್ಯಾಕ್ಟರ್ನಲ್ಲಿ ಟೆಂಟ್ ಹಾಕಿ ವಾಸ ಮಾಡ್ತಿದ್ದಾರೆ.
ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಯೋಧನ ಆರೋಗ್ಯ ಪರೀಕ್ಷೆ ಮಾಡಿದ್ದು, ಯೋಧನಿಗೆ ಕೊರೊನಾದ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಆದರೆ ನನ್ನಿಂದ ಗ್ರಾಮದ ಜನರಿಗೆ ಮತ್ತು ಮನಯಲ್ಲಿರುವ ತಾಯಿ ಮತ್ತು ಓರ್ವ ಸಹೋದರನಿದ್ದು ಯಾರಿಗೂ ತೊಂದರೆಯಾಗಬಾರದೆಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಯೋಧ ಟ್ರ್ಯಾಕ್ಟರ್ ಟ್ರೈಲರ್ನಲ್ಲಿ ಗುಡಿಸಲು ರೀತಿಯಲ್ಲಿ ಟೆಂಟ್ ಹಾಕಿಕೊಂಡಿದ್ದಾರೆ. ಜೊತೆಗೆ ಸುತ್ತಲು ಸುಮಾರು ನಾಲ್ಕೈದು ಅಡಿಯಷ್ಟು ಹಗ್ಗ ಹಾಕಿಕೊಂಡಿದ್ದಾರೆ. ಇನ್ನು ದಿನ ನಿತ್ಯ ಮನೆಯಿಂದ ಊಟ, ಬೆಳಗಿನ ಉಪಹಾರ ತರಿಸಿಕೊಂಡು ಹೊಲದಲ್ಲಿ ಕಾಲ ಕಳೆಯುತ್ತಿರುವ ಯೋಧನ ನಿರ್ಧಾರಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದ್ಯ ಚೀನಾ ಮತ್ತು ಭಾರತದ ನಡುವೆ ಬಿಕ್ಕಟ್ಟಿಗೆ ಕಾರಣವಾಗಿರುವ ಲಡಾಖ್ನಲ್ಲಿ ಯೋಧ ಪ್ರಕಾಶ್ ಅವರು 2008 ರಿಂದ 2012 ರವರೆಗೆ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಸಿಕ್ಕೀಂ, ಉತ್ತರಾಖಂಡ, ಪಂಜಾಬ್ ಜೊತೆಗೆ ಈಗ ಅರುಣಾಚಲ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.