ಗದಗ: ಗ್ರಾಪಂ ಸದಸ್ಯನೊಬ್ಬ ಲಾಕ್‌ಡೌನ್ ಸಮಯದಲ್ಲಿ ಅಕ್ರಮವಾಗಿ ಮಾಡ್ತಿದ್ದ ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದ ಯೋಧನ ಕುಟುಂಬಕ್ಕೆ ಬಹಿಷ್ಕಾರದ ಶಿಕ್ಷೆ ನೀಡಿರೋ ಅಮಾನವೀಯ ಘಟನೆ.
ಇಂತಹ ಒಂದು ವಿಲಕ್ಷಣ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಉಳ್ಳಟ್ಟಿ ಗ್ರಾಮದಲ್ಲಿ ನಡೆದಿದೆ. ಯೋಧ ಬಾಬಣ್ಣ ಲಮಾಣಿ ರಜೆಯ ನಿಮಿತ್ತ ಊರಿಗೆ ಬಂದಿದ್ದರು. ಆದರೆ, ಈ ವೇಳೆ ಲಾಕ್‌ಡೌನ್ ಘೋಷಿಸಿದ ಪರಿಣಾಮ ಮರಳಿ ಕಾಶ್ಮೀರಕ್ಕೆ ಹೋಗಲಾರದೇ ಇಲ್ಲೇ ಉಳಿದಿದ್ರು.
ಯೋಧನ ಉರಿನಲ್ಲಿ ಗ್ರಾಪಂ ಸದಸ್ಯ ಕೃಷ್ಣಪ್ಪ ಲಮಾಣಿ ಎಂಬಾತ ಈ ಅಕ್ರಮ ಮದ್ಯ ಮಾರಾಟ ಮಾಡ್ತಿದ್ದ. ಯೋಧ ಬಾಬಣ್ಣ ಇದನ್ನ ವಿರೋಧಿಸಲು ಮುಂದಾಗಿದ್ದರು. ಪೊಲೀಸರಿಗೆ ಈ ಅಕ್ರಮದ ಬಗ್ಗೆ ಮಾಹಿತಿ ತಿಳಿಸಿದರು. ಬಳಿಕ ಪೊಲೀಸರು ಗ್ರಾಮಕ್ಕೆ ದಾಳಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿದರು. ಇದರಿಂದ ಕೋಪಗೊಂಡ ಗ್ರಾಮ ಪಂಚಾಯತ್ ಸದಸ್ಯ ಯೋಧನ ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರದ ಶಿಕ್ಷೆ ನೀಡಿದ. ಯೋಧನ ಕುಟುಂಬವನ್ನ ಯಾರೂ ಸೇರಿಸಿಕೊಳ್ಳುವ ಹಾಗಿಲ್ಲ,ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುವ ಹಾಗಿಲ್ಲ ಅಂತ ತಾಕೀತು ಮಾಡಿದ. ಒಂದು ವೇಳೆ ಯಾರಾದರೂ ಅವರನ್ನ ಸೇರಿಸಿಕೊಂಡರೆ ದಂಡ ವಿಧಿಸಲಾಗುವುದು ಅಂತಾ ಗ್ರಾಮದ ಜನರಿಗೆ ಬೆದರಿಸಿದ.
ವಿಪರ್ಯಾಸವೆಂದರೆ ಇಂದು ಯೋಧನ ತಾಯಿ ಸಕ್ರವ್ವ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆದರೆ, ಗ್ರಾಪಂ ಸದಸ್ಯನ ಹೇಳಿದಂತೆ ಗ್ರಾಮದ ಜನ ಅಂತ್ಯಕ್ರಿಯೆಗೆ ಯಾರೂ ಬಾರದೆ ಅಸಹಕಾರ ತೋರಿದ್ದರು. ಹೀಗಾಗಿ ಯೋಧ ಬಾಬಣ್ಣ ಮತ್ತು ಕುಟುಂಬಸ್ಥರು ಬಹಳಷ್ಟು ನೊಂದುಕೊಂಡಿದ್ದರು. ಆದರೆ, ವಿಷಯ ತಿಳಿದು ಗ್ರಾಮಕ್ಕೆ ಭೇಟಿ ಕೊಟ್ಟ ಪೊಲೀಸ್ ಸಿಬ್ಬಂದಿ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿದ್ದಾರೆ. ಗ್ರಾಪಂ ಸದಸ್ಯ, ಯೋಧ ಬಾಬಣ್ಣನ ಜೊತೆ ರಾಜಿ ಮಾಡಿಸಿದ್ದಾರೆ. ಅಧಿಕಾರಿಗಳ ಸಂಧಾನದ ಬಳಿಕ ಲಾಕ್‌ಡೌನ್ ನಿಯಮದ ಪ್ರಕಾರ ಕೆಲವೇ ಕೆಲ ಗ್ರಾಮದ ಜನರು ಮತ್ತು ಬಾಬಣ್ಣ ಕುಟುಂಬದವರು ಸೇರಿ ಯೋಧನ ತಾಯಿಯ ಅಂತ್ಯಕ್ರಿಯೆ ಮಾಡಿದ್ದಾರೆ. ಬಹಿಷ್ಕಾರವನ್ನ ಹಿಂತೆಗೆದುಕೊಂಡಿದ್ದಾರೆ.