ಗದಗ: ಲಾಕ್ಡೌನ್ ಹಾಗೂ ಕರ್ಫ್ಯೂ ನಡುವೆ ಗದಗ ಜಿಲ್ಲೆಯಲ್ಲಿಂದು ಸುಮಾರು 50 ಕ್ಕೂ ಹೆಚ್ಚು ಜೋಡಿಗಳ ಸರಳ ಮದುವೆ ನಡೆದಿವೆ. ವಿವಾಹ ನಡೆಯುವ ಹಳ್ಳಿ ಹಳ್ಳಿಗಳಲ್ಲಿ ಪೊಲೀಸರೇ ಮುಂದೆ ನಿಂತು ಸರಳ ರೀತಿಯಲ್ಲಿ ಮದುವೆ ಮಾಡಿಸಿದ್ದಾರೆ.
ಗದಗ ನಗರ ಹಾಗೂ ತಾಲೂಕಿನ ಹೊಂಬಳ, ಹುಲಕೋಟಿ, ಕುರ್ತಕೋಟಿ, ಬೆಳಹೊಡ, ಚಿಕ್ಕ ಹಂದಿಗೋಳ, ಕದಡಿ, ಬಳಗಾನೂರ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಸುಮಾರು 50 ಜೋಡಿ ಕೊರೊನಾದ ನಡುವೆಯೂ ನವ ದಾಂಪತ್ಯಕ್ಕೆ ಕಾಲಿಟ್ಟಿವೆ.
ಗ್ರಾಮೀಣ ಭಾಗದಲ್ಲಿ ನಡೆದ ಮದುವೆಗಳು ಗದಗ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಿಕಾರ್ಜುನ ಕುಲಕರ್ಣಿ ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ನಡೆದವು. ಸರ್ಕಾರ ವಿಧಿಸಿದ್ದ ನಿರ್ಬಂಧನೆ ಪಾಲಿಸಿ, ಕಡಿಮೆ ಜನಸಂಖ್ಯೆ, ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಧರಿಸಿ ಸಪ್ತಪದಿ ತುಳಿದರು.
ವಧು-ವರರ ಸಂಬಂಧಿಗಳು ಸಹ ಸಾಮಾಜಿಕ ಅಂತರ ಕಾಯ್ದುಕೊಂಡು ಅಕ್ಷತೆ ಹಾಕಿ ಆಶೀರ್ವದಿಸಿದರು. ಕೊರೊನಾ ಅಟ್ಟಹಾಸಕ್ಕೆ ಮದುವೆ ಸಂಭ್ರಮಗಳು ಕಳೆಗುಂದಿದಂತಾಗಿದೆ. ಆಡಂಬರಕ್ಕೆ ಕಡಿವಾಣ ಹಾಕಲಾಗಿದೆ.