ಗದಗ: ಪಿಎಫ್ಐ ಸಂಘಟನೆಗೆ ಉಗ್ರ ಕೃತ್ಯ ನಡೆಸಲು ಹಣ ಸಂದಾಯವಾಗಿರೋ ವಿಚಾರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ಕಾರ್ಯಕ್ರಮಕ್ಕೂ ಮೊದಲು ಮಾತನಾಡಿದ ಅವರು, ಇದೊಂದು ಸುಳ್ಳು ಆರೋಪವಾಗಿದೆ. ಆ ಸಂಘಟನೆಗಳಿಗೆ ಹಣ ಎಲ್ಲಿಂದ ಬರುತ್ತೆ ಅಂತ ನನಗೆ ಹೇಗೆ ಗೊತ್ತು. ನನಗೂ ಸಂಘಟನೆಗೂ ಏನು ಸಂಬಂಧ. ಅವರಿಗೆ ಹಣ ಹೇಗೆ ಬರುತ್ತೆ ಅಂತ ಅವರನ್ನೇ ಕೇಳಿ ಎಂದು ಗುಡುಗಿದ್ರು.
ಇನ್ನು ಪೌರತ್ವ ಕಾಯ್ದೆ ವಿಚಾರವಾಗಿ ಮಾತನಾಡಿ, ಈ ಕಾಯ್ದೆಯನ್ನು ಕೇವಲ ಮುಸಲ್ಮಾನರಿಗಷ್ಟೇ ವಿರೋಧ ಮಾಡುತ್ತಿಲ್ಲ. ದಲಿತರು, ಅಲೆಮಾರಿಗಳು, ಕಾಡು ಜನ್ರು ಎಲ್ಲರೂ ವಿರೋಧ ಮಾಡ್ತಿದ್ದಾರೆ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಳಂಬದ ಕುರಿತು ಮಾತನಾಡಿ, ಹೊಸ ಶಾಸಕರಿಗೆ ಸಚಿವ ಸ್ಥಾನ ಕೊಟ್ರೆ ಒಳ್ಳೆಯದು. ಸೋತವರಿಗೆ ಯಾಕೆ ಸಚಿವ ಸ್ಥಾನ ಕೊಡುತ್ತಾರೆ. ಚುನಾವಣೆಯಲ್ಲಿ ಸೋತವರಿಗೆ ಮಂತ್ರಿ ಮಾಡ್ತಾರಾ ಎನ್ನುವ ಮೂಲಕ ಎಚ್ ವಿಶ್ವನಾಥ್, ಎಂಟಿಬಿ ನಾಗರಾಜ್ ವಿರುದ್ಧವೂ ಸಿದ್ದರಾಮಯ್ಯ ಕಿಡಿಕಾರಿದ್ರು.
ಇನ್ನು ರಾಜ್ಯದ ಖಜಾನೆ ಖಾಲಿಯಾಗಿರೋ ಕುರಿತು ವಾಗ್ದಾಳಿ ನಡೆಸಿದ ಅವರು, ರಾಜ್ಯ, ಕೇಂದ್ರ ಸರ್ಕಾರಗಳ ಖಜಾನೆ ಖಾಲಿಯಾಗಿವೆ. ಸಿಎಂ ಯಡಿಯೂರಪ್ಪ ಪೆದ್ದನಂತೆ ಮಾತನಾಡುತ್ತಾರೆ. ಅದಕ್ಕೆ ನಾನೇನು ಹೇಳಲಿ. ಹಣವೇ ಇಲ್ಲ ಎಂದ ಮೇಲೆ ಬಜೆಟ್ನಲ್ಲಿ ಎಲ್ಲಿಂದ ಬರುತ್ತೆ ಅಂತ ಪ್ರಶ್ನೆ ಮಾಡಿದ್ರು.
ಕೇಂದ್ರ ಸರ್ಕಾರ ರಾಜ್ಯದ ಪಾಲಿನ ತೆರಿಗೆ ಹಣ ನೀಡಿಲ್ಲ. ನರೇಗಾ ಹಣ ನೀಡಿಲ್ಲ. ಕೇಂದ್ರದಲ್ಲೇ ಹಣ ಇಲ್ಲ. ಹೀಗಾಗಿ ರಾಜ್ಯಕ್ಕೆ ಹಣ ನೀಡಿಲ್ಲ. ಕೇಂದ್ರ ಸರ್ಕಾರದ ತೆರಿಗೆ ವಸೂಲಿಯಲ್ಲಿ 2 ಲಕ್ಷ ಕೋಟಿ ಕಡಿಮೆಯಾಗಿದೆ. ತೆರಿಗೆ ಹಣ ವಸೂಲಿ ಮಾಡಿಲ್ಲ. ಹೀಗಾಗಿ ಖಜಾನೆ ಖಾಲಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ರು.