ಗದಗ: ಜಿಲ್ಲೆಯ ಶಾಲೆಯೊಂದರಲ್ಲಿ ತರಗತಿಗೆ ಚಕ್ಕರ್ ಹಾಕಿದ ವಿದ್ಯಾರ್ಥಿನಿಯರಿಗೆ ಟಾಯ್ಲೆಟ್ ಕ್ಲೀನ್ ಮಾಡುವ ಕೆಲಸ ಕೊಡ್ತಾರಂತೆ. ನಾಗಾವಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಶಿಕ್ಷಕಿಯ ಆದೇಶದನ್ವಯ 7ನೇ ತರಗತಿಯ ನಾಲ್ಕೈದು ವಿದ್ಯಾರ್ಥಿನಿಯರು ಶೌಚಾಲಯ ಶುಚಿ ಮಾಡಿದ್ದಾರಂತೆ. "ಶೌಚಾಲಯ ಸ್ವಚ್ಛಗೊಳಿಸದಿದ್ದರೆ ಮಿಸ್ ಹೊಡೀತಾರೆ, ಅವರು ಹೇಳಿದ ಮೇಲೆ ಮಾಡಲೇಬೇಕಲ್ವಾ?" ಅಂತ ಮಕ್ಕಳು ದೂರಿದ್ದಾರೆ. ಇದೇ ರೀತಿ 6ನೇ ತರಗತಿ ಮತ್ತು 7ನೇ ತರಗತಿ ಮಕ್ಕಳಿಗೂ ಟಾಯ್ಲೆಟ್ ಸ್ವಚ್ಛಗೊಳಿಸಲು ಮಿಸ್ ಹೇಳ್ತಾರಂತೆ.
"ಶೌಚಾಲಯ ಸ್ವಚ್ಛಗೊಳಿಸಿರುವ ಸಂಗತಿಯನ್ನು ಅಧಿಕಾರಿಗಳ ಮುಂದೆ ಹೇಳಿದ್ರೆ ಥಳಿಸುವುದಾಗಿ ಶಿಕ್ಷಕಿ ಹೇಳುತ್ತಾರೆ. ಇದಕ್ಕೆ ಹೆದರಿ ಕೆಲ ಸಹಪಾಠಿಗಳು ಈ ವಿಷಯವನ್ನು ಹೇಳುವುದಕ್ಕೆ ಹಿಂಜರಿಯುತ್ತಿದ್ದಾರೆ" ಎಂದು ವಿದ್ಯಾರ್ಥಿನಿಯೊಬ್ಬಳು ತಿಳಿಸಿದ್ದಾಳೆ.
ಮತ್ತೊಬ್ಬ ವಿದ್ಯಾರ್ಥಿನಿ ಮಾತನಾಡಿ, "ಶೌಚಾಲಯ ಶುಚಿಯಾಗಿಲ್ಲ. ನಾವೇ ಬಳಸುವುದರಿಂದ ನಾಲ್ಕೈದು ವಿದ್ಯಾರ್ಥಿನಿಯರಿಗೆ ಶುಚಿಗೊಳಿಸುವಂತೆ ಶಿಕ್ಷಕಿ ಸೂಚಿಸಿದ್ದರು. ಅದರಂತೆ ನಾವು ಸ್ವಚ್ಛಗೊಳಿಸಿದ್ದೆವು. ಶೌಚಾಲಯ ಶುಚಿಗೊಳಿಸಲು ನಾನು ಅವರಿಗೆ ನೀರು ತಂದುಕೊಡುತ್ತಿದ್ದೆ. ಇನ್ನುಳಿದವರು ಕ್ಲೀನ್ ಮಾಡುತ್ತಿದ್ದರು. ಈ ಸುದ್ದಿ ತಿಳಿದು ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ನಮ್ಮನ್ನು ವಿಚಾರಿಸಿದರು. ಶೌಚಾಲಯ ಶುಚಿಗೊಳಿಸುವಂತೆ ಯಾರಾದ್ರೂ ನಿಮಗೆ ಹೇಳಿದ್ರಾ? ಎಂದು ಪ್ರಶ್ನಿಸಿದ್ದರುರು. ನಾವು ಅವರಿಗೆ ಎಲ್ಲವನ್ನೂ ಹೇಳಿದ್ದೇವೆ" ಎಂದು ಹೇಳಿದ್ದಾಳೆ.
"ಮಕ್ಕಳು ಟಾಯ್ಲೆಟ್ ಕ್ಲೀನ್ ಮಾಡುವ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಕ್ಕೆ ನನ್ನ ಮೇಲೆ ಶಿಕ್ಷಕರು ಮತ್ತು ಅಧಿಕಾರಿಗಳು ದರ್ಪ ತೋರಿದ್ದಾರೆ. ನಿನ್ನ ಕೆಲಸವೇನು ಅಷ್ಟು ಮಾಡು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ. ನೀನೇನು ಇಲ್ಲಿ ಡಾನ್ ಆಗಿದ್ದೀಯಾ?" ಎಂದು ಗದರಿಸಿದರೆಂದು ಅಡುಗೆ ಸಹಾಯಕಿ ಆರೋಪಿಸಿದ್ದಾರೆ.
ಇದನ್ನೂ ಓದಿ: ನಮ್ಮೂರಿಗೆ ಬಸ್ ಇಲ್ಲ ಸರ್.. ಸಚಿವರ ಕ್ಷೇತ್ರದ ಸಮಸ್ಯೆಯನ್ನು ಸಭೆಗೆ ಬಂದು ಮನವರಿಕೆ ಮಾಡಿದ ಮಕ್ಕಳು