ಗದಗ: ರೌಡಿಶೀಟರ್ಗಳ ಅಟ್ಟಹಾಸಕ್ಕೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಜನರು ಬೆಚ್ಚಿದ್ದಾರೆ. ಸಿನಿಮೀಯ ರೀತಿಯಲ್ಲಿ ಕಾರ್ನಲ್ಲಿ ಬಂದ ರೌಡಿಗಳ ಗ್ಯಾಂಗ್ ಬೈಕ್ಗೆ ಡಿಕ್ಕಿ ಹೊಡೆದು, ನೂರ್ ಅಹ್ಮದ್ ಮಕಾಂದಾರ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಹಲ್ಲೆ ಮಾಡಿದೆ.
ನಡುರಸ್ತೆಯಲ್ಲಿ ಗಾಯಗೊಂಡ ವ್ಯಕ್ತಿ ಒದ್ದಾಡುತ್ತಿದ್ದಂತೆ ರೌಡಿಶೀಟರ್ಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಅಬ್ದುಲ್ ಆಡೂರ್, ಲಕ್ಷ್ಮೇಶ್ವರ ಪುರಸಭೆ ಸದಸ್ಯ ಫಿರದೋಶ್ ಆಡೂರ್, ನಿಜಾಮ್, ಅಜರ್ ಎನ್ನುವವರು ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸಿನಿಮೀಯ ರೀತಿಯಲ್ಲಿ ಹಲ್ಲೆ:
ಪಟ್ಟಣದ ಹುಲಗೇರಿಬಣದ ಪ್ರದೇಶದಲ್ಲಿ ನೂರ್ ಅಹ್ಮದ್ ಮಕಾಂದಾರ ಮನೆಗೆ ಹೋಗುತ್ತಿದ್ದ ವೇಳೆ ಎದುರಿನಿಂದ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಆಗ ನೂರ್ ಅಹ್ಮದ್ ನೆಲಕ್ಕೆ ಉರುಳಿದ್ದಾರೆ. ಈ ವೇಳೆ ಕಾರ್ನಿಂದಿಳಿದು ಬಂದ ರೌಡಿಗಳ ತಂಡ ಲಾಂಗ್, ಮಚ್ಚು, ಕೊಡಲಿಯಿಂದ ದಾಳಿ ಮಾಡಿದ್ದಾರೆ. ಗಾಯಾಳುವನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಕ್ಷ್ಮೇಶ್ವರ ಪೊಲೀಸರ ನಿರ್ಲಕ್ಷ್ಯ ಆರೋಪ
ಕೊಲೆ ಮಾಡಲು ಸಂಚು ರೂಪಿಸಿಯೇ ನನ್ನ ಮೇಲೆ ದಾಳಿ ಮಾಡಿದ್ದಾರೆ. 2-3 ಬಾರಿ ನಾನು ಲಕ್ಷ್ಮೇಶ್ವರ ಪಿಎಸ್ಐ ಡಿ. ಪ್ರಕಾಶ್ ಅವರಿಗೆ ಈ ಬಗ್ಗೆ ಹೇಳಿದ್ದೆ. ಆದ್ರೆ, ಲಕ್ಷ್ಮೇಶ್ವರ ಪೊಲೀಸರು ನಿರ್ಲಕ್ಷ್ಯ ತೋರಿದ್ದೇ ಈ ದಾಳಿಗೆ ಕಾರಣ ಎಂದು ಹಲ್ಲೆಗೊಳಗಾದ ವ್ಯಕ್ತಿ ಆರೋಪಿಸಿದ್ದಾರೆ.
ಹಳೆ ದ್ವೇಷವೇ ದಾಳಿಗೆ ಕಾರಣ?
ಹಳೆ ದ್ವೇಷವೇ ಈ ದಾಳಿಗೆ ಕಾರಣ ಎನ್ನಲಾಗಿದೆ. ಮಕಾಂದಾರ ಹಾಗೂ ಆಡೂರ್ ಕುಟುಂಬದ ನಡುವೆ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಗಲಾಟೆ ನಡೆಯುತ್ತಿತ್ತು. ಎಂಟು ತಿಂಗಳ ಹಿಂದೆ ಪುರಸಭೆ ಸದಸ್ಯ ಫಿರದೋಶ್ ಆಡೂರ್ ಕುಟುಂಬ ನೂರ್ ಅಹ್ಮದ್ ಹೋಟೆಲ್ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿದ್ದರು. ಆಗಲೂ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮೂವರು ಅರೆಸ್ಟ್ -ಓರ್ವ ಪರಾರಿ:
ಜನಸೇವೆ ಮಾಡಬೇಕಾದ ಲಕ್ಷ್ಮೇಶ್ವರ ಪುರಸಭೆ ಸದಸ್ಯ ಫಿರದೋಶ್ ಆಡೂರ್ ಗೂಂಡಾಗಿರಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಹೋದರ ರೌಡಿ ಶೀಟರ್ ಅಬ್ದುಲ್ ಆಡೂರ್, ನಿಜಾಮ್, ಅಜರ್ ಸೇರಿ ನಾಲ್ಕು ಜನರ ವಿರುದ್ಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರೌಡಿಶೀಟರ್ ಅಬ್ದುಲ್ ಆಡೂರ್, ನಿಜಾಮ್ ಹಾಗೂ ಅಜರ್ ನನ್ನು ಲಕ್ಷ್ಮೇಶ್ವರ ಪೊಲೀಸರು ಬಂಧಿಸಿದ್ದಾರೆ. ಪುರಸಭೆ ಸದಸ್ಯ ಫಿರದೋಶ್ ಆಡೂರ್ ಪರಾರಿಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಎಂಇಎಸ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಬೆಳಗಾವಿ ಪೊಲೀಸರು
ಎಸ್ಪಿ ಯತೀಶ್.ಎನ್ ಮಾತನಾಡಿ, ನಿನ್ನೆ ಸಂಜೆ ಈ ಹಲ್ಲೆ ಕುರಿತು ನಮಗೆ ಮಾಹಿತಿ ಬಂದಿದೆ. ನಾಲ್ಕು ಮಂದಿ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಂಗಡಿ ವಿಚಾರವಾಗಿ ಗಲಾಟೆ ನಡೆದಿದೆ. ಈ ಮೊದಲ ಗಲಾಟೆ ಸಂಬಂಧ ಏನು ಕ್ರಮ ಕೈಗೊಳ್ಳಬೇಕಿತ್ತೋ ಅದನ್ನು ಕೈಗೊಂಡಿದ್ದೇವೆ. ಈಗಲೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.