ಗದಗ : ಕ್ಷುಲ್ಲಕ ಕಾರಣಕ್ಕೆ ಪ್ರೊಬೆಷನರಿ ಪಿಎಸ್ಐ ಮತ್ತು ಅವರ ಸ್ನೇಹಿತರು ಸೇರಿ ಡಾಬಾ ಮಾಲೀನಕನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಅಲ್ಲದೇ ಡಾಬಾವನ್ನು ಧ್ವಂಸಗೊಳಿಸಿ ಗೂಂಡಾಗಿರಿ ಮೆರೆದಿದ್ದಾರೆ ಎನ್ನಲಾಗ್ತಿದೆ. ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬೇವಿನಕಟ್ಟಿ ಗ್ರಾಮದ ಬಳಿ ಈ ಪ್ರಕರಣ ನಡೆದಿದೆ. ಲಕ್ಕಿ ಡಾಬಾದ ಮಾಲೀಕ ಶ್ರೀಶೈಲ್ ಕಳ್ಳಿಮಠ ಎಂಬುವರ ತಲೆಗೆ ಸೋಡಾ ಗ್ಲಾಸ್ನಿಂದ ಹಲ್ಲೆ ಮಾಡಿ ಬಳಿಕ ದಾಬಾ ಧ್ವಂಸಗೊಳಿಸಿದ್ದಾರೆ ಎಂದು ದೂರಲಾಗಿದೆ.
ಸೋಮವಾರ ತಡರಾತ್ರಿ ಬಾಗಲಕೋಟೆಯ ನವನಗರದ ಪೊಲೀಸ್ ಠಾಣೆಯಲ್ಲಿ ಪ್ರೊಬೆಷನರಿ ಪಿ.ಎಸ್.ಐ ಹುದ್ದೆಯಲ್ಲಿರೋ ಅರವಿಂದ ಅಂಗಡಿ ಮತ್ತು ಇನ್ನೂ ಐದು ಜನ ಸ್ನೇಹಿತರು ಲಕ್ಕಿ ದಾಬಾಕ್ಕೆ ಊಟ ಮಾಡಲು ಹೋಗಿದ್ದರು. ಊಟ ಮಾಡಿದ ಬಳಿಕ ಹಿಂದಿನ ಸಣ್ಣ ಗಲಾಟೆ ಸಂಬಂಧ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಅರವಿಂದ ಅವರ ಸ್ನೇಹಿತ ಹನುಮಂತ ಎಂಬಾತ (ಈತನೂ ಸಹ ಆರ್ಮಿಯಲ್ಲಿ ಸೇವೆಯಲ್ಲಿರುವವನು) ಸೇರಿ ಗಲಾಟೆ ಮಾಡಿದ್ದಾರೆ ಎನ್ನಲಾಗ್ತಿದೆ.
ದಾಬಾ ಮಾಲೀಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರಂತೆ. ಜೊತೆಗೆ ನಶೆಯಲ್ಲಿ ದಾಬಾಕ್ಕೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಸದ್ಯ ಈ ಎಲ್ಲಾ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಗಜೇಂದ್ರಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಗೊಂಡಿರೋ ಡಾಬಾ ಮಾಲೀಕ ಗಜೇಂದ್ರಗಡ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: ವಿಜಯನಗರ : ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಸ್ನೇಹಿತನ ಕೊಲೆ