ಗದಗ: ಕಾಂಗ್ರೆಸ್ ಸಹಕಾರ ಕೊಟ್ಟಿದ್ದರೆ ಈಗ ವ್ಯಾಕ್ಸಿನೇಷನ್ ಮುಗಿದಿರುತ್ತಿತ್ತು ಎಂದು ಗದಗನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಯಾಕೆ ಲಸಿಕೆ ಹಾಕಿಸಿಕೊಳ್ಳಲಿಲ್ಲಾ ಅನ್ನೋ ಹೊಸ ಪ್ರಶ್ನೆಯನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಆದರೆ ಯಾರಿಗೆ ಲಸಿಕೆ ಕೊಡಬೇಕು ಅನ್ನೋ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚೆಯಾಗಿತ್ತು ಎಂದಿದ್ದಾರೆ.
ಮಂತ್ರಿಗಳಿಗೆ, ಎಮ್ಎಲ್ಎ ಗಳಿಗೆ ಲಸಿಕೆ ಕೊಟ್ಟಿದ್ದರೆ ಮೊದಲು ರಾಜಕಾರಣಿಗಳಿಗೆ ಕೊಟ್ಟರು ಎನ್ನುತ್ತಿದ್ದರು. 80 ಪ್ರತಿಶತ ಲಸಿಕೆಯನ್ನ ಭಾರತವೇ ಉತ್ಪಾದಿಸಿದೆ. ದಡಾರ, ಪೋಲಿಯೋ ಲಸಿಕೆ ಬೇಡಿಕೆಯನ್ನು ಪೂರೈಸೋದು ಭಾರತ. ಅಂಥ ಸಂದರ್ಭದಲ್ಲಿ ಭಾರತದ ವ್ಯಾಕ್ಸಿನ್ ಕ್ವಾಲಿಟಿ ಪ್ರಶ್ನೆ ಮಾಡಿದರು. ಮಕ್ಕಳಾಗಲ್ಲ, ಪ್ಯಾರಲೈಸಸ್, ಹೃದಯ ಸಂಬಂಧಿ ಕಾಯಿಲೆ ಬರುತ್ತೆ ಅಂತಾ ಅಪಪ್ರಚಾರ ಮಾಡಿದರು. ಆದರೆ ಅವರೇ ಈಗ ವ್ಯಾಕ್ಸಿನ್ ತೆಗೆದುಕೊಂಡು ಫೋಟೋ ಹಾಕ್ತಿದ್ದಾರೆ ಎಂದರು.
ಅವರ ತಪ್ಪು ಅರಿವಾಗಿಲ್ಲಾ. ಈಗ ಪ್ರಶ್ನೆ ಮಾಡುತ್ತಿದ್ದಾರೆ. ಕಾಂಗ್ರೆಸ್ಗೆ ಜನರ ಜೀವನದ ಬಗ್ಗೆ ಕಾಳಜಿ ಇಲ್ಲಾ. ಅವರಿಗೆ ಒಂದೇ ಫ್ಯಾಮಿಲಿ ಮೇಲೆ ಕಾಳಜಿ ಇದೆ ಎಂದು ವಾಗ್ದಾಳಿ ನಡೆಸಿದರು.