ಗದಗ: ಎಪಿಎಂಸಿ ಮಾರುಕಟ್ಟೆಯಲ್ಲಿನ ವಸ್ತುಗಳನ್ನು ಸಾಗಿಸೋಕೆ ಹಮಾಲರ ಕೆಲಸ ಅತ್ಯಗತ್ಯ. ಇವರ ಕೆಲಸದ ಅಗತ್ಯತೆಯನ್ನು ಗುರುತಿಸಿ ಎಪಿಎಂಸಿ ಇವರಿಗೆ ಪಾಸ್ ಸಹ ನೀಡಿ ಕೆಲಸಕ್ಕೆ ಕೊಟ್ಟಿದೆ. ಆದರೆ ಜಿಲ್ಲೆಯ ಪೊಲೀಸರು ಸಿಕ್ಕ ಸಿಕ್ಕವರ ಮೇಲೆ ಲಾಠಿ ಬೀಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಜನರು ನಿತ್ಯ ಬಳಕೆಯ ವಸ್ತುಗಳಿಗೆ ಪರದಾಡ್ತಿದ್ದಾರೆ. ಅದರಲ್ಲೂ ತರಕಾರಿ ದಿನಸಿ ವಸ್ತುಗಳಿಗೆ ತೊಂದರೆಯಾಗದಂತೆ ಸರ್ಕಾರ ತರಕಾರಿ ಮತ್ತು ದಿನಸಿ ವಸ್ತುಗಳ ವ್ಯಾಪಾರಕ್ಕೆ ವಿನಾಯಿತಿ ನೀಡಿದೆ.
ಎಪಿಎಂಸಿ ಡಂಬಳದಿಂದ ಜಿಲ್ಲೆಗೆ ಕೆಲಸಕ್ಕೆ ಬರೋ ವೇಳೆ ಎಪಿಎಂಸಿ ಮೊದಲ ಗೇಟ್ ಬಳಿ ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಪಾಸ್ಗಳನ್ನ ಹರಿದು ಹಾಕಿ ಹಿಗ್ಗಾಮುಗ್ಗಾ ಲಾಠಿಯಿಂದ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ಮುಂದೆ ಕೆಲಸಕ್ಕೆ ಬರುವುದಿಲ್ಲ ಅಂತ ಎಪಿಎಂಸಿ ಕಚೇರಿ ಬಳಿ ಹಿರಿಯ ಅಧಿಕಾರಿಗಳ ಮುಂದೆ ಪ್ರತಿಭಟನೆ ಮೂಲಕ ಅಳಲು ತೋಡಿಕೊಂಡಿದ್ದಾರೆ.
ನಮ್ಮ ಮೇಲೆ ವಿನಾ ಕಾರಣ ದರ್ಪ ತೋರಿರುವ ಪೊಲೀಸ್ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯಿಸಿ ಕೆಲಸ ಮಾಡೋದಿಲ್ಲಾ ಅಂತ ಪಟ್ಟು ಹಿಡಿದಿದ್ದರು. ಇನ್ನು ಸ್ಥಳಕ್ಕೆ ಡಿವೈಎಸ್.ಪಿ ಪ್ರಹ್ಲಾದ್ ಅವರು ಭೇಟಿ ನೀಡಿ ಹಮಾಲರ ಮನವೊಲಿಸಲು ಪ್ರಯತ್ನಿಸಿದರು. ನಿಮ್ಮ ಮೇಲೆ ಲಾಠಿ ಬೀಸಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಹಮಾಲರು ಪ್ರತಿಭಟನೆ ಕೈಬಿಟ್ಟರು.