ಗದಗ: ನಟ ಯಶ್ ಬರ್ತ್‌ಡೇ ಕಟೌಟ್ ನಿಲ್ಲಿಸುವಾಗ ಮೂವರು ಸಾವು ಪ್ರಕರಣ ಸಂಬಂಧ ನಗರದ ಜಿಮ್ಸ್ ಆಸ್ಪತ್ರೆಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭೇಟಿ ನೀಡಿ, ಗಾಯಾಳುಗಳು ಹಾಗೂ ಕುಟುಂಬಸ್ಥರಿಂದ ಮಾಹಿತಿ ಪಡೆದರು.
ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಮಂಜುನಾಥ್, ಹನಮಂತ ಹಾಗೂ ಕುಟುಂಬಸ್ಥರ ವಿಚಾರಣೆ ನಡೆಸಿ, ಮಾಹಿತಿ ಕಲೆ ಹಾಕಿದರು. ಸಿಪಿಐ ಎನ್.ಬಿ ಶಿರೂರ, ಪಿಎಸ್ಐ ರಾಘವೇಂದ್ರ ಗುರ್ಲ ನೇತೃತ್ವದ ಅಧಿಕಾರಿಗಳ ತಂಡವು ಬಾಗಲಕೋಟೆಯಿಂದ ಆಗಮಿಸಿತ್ತು.
ಕಳೆದ ಸೋಮವಾರ ನಟ ಯಶ್ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಕಟೌಟ್ ನಿಲ್ಲಿಸುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಮೂವರು ಯುವಕರು ಸಾವನ್ನಪ್ಪಿದ್ದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿತ್ತು. ಸೂರಣಗಿ ಗ್ರಾಮದ ಯುವಕರು ಬರ್ತ್‌ಡೇ ಕಟೌಟ್ ಕಟ್ಟಲು ಮುಂದಾಗಿದ್ದಾಗ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ದುರಂತ ಸಂಭವಿಸಿತ್ತು. ಘಟನೆಯಲ್ಲಿ ಇತರ ಮೂವರು ಯುವಕರಿಗೆ ಗಾಯಗಳಾಗಿತ್ತು. ಸದ್ಯ ಅವರು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೋಷಕರಿಗೆ ಸಾಂತ್ವನ ಹೇಳಿದ್ದ ಯಶ್: ಮಾಹಿತಿ ತಿಳಿದು ನಟ ಯಶ್ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿ, ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಯುವಕರ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಮೃತರ ಮನೆಗಳಿಗೆ ತೆರಳಿ ಪೋಷಕರಿಗೆ ಧೈರ್ಯ ತುಂಬಿದ್ದರು. ಈ ವೇಳೆ ಪೋಷಕರು ತಮ್ಮ ನೋವನ್ನು ತೋಡಿಕೊಂಡರು. ಸಾಂತ್ವನದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಯಶ್, 'ಮೃತರ ಕುಟುಂಬಕ್ಕೆ ಏನು ಅಗತ್ಯವೋ ಅದನ್ನು ಮಾಡುವೆ. ಏನೇ ಪರಿಹಾರ ಕೊಟ್ಟರೂ ಅವರ ಮಕ್ಕಳು ವಾಪಸ್ ಬರುವುದಿಲ್ಲ. ಅಭಿಮಾನ ತೋರಿಸುವುದಾದರೆ ನಿಮ್ಮ ಬದುಕಲ್ಲಿ ಖುಷಿಯಾಗಿರಿ, ನಮ್ಮ ಬಗ್ಗೆ ಯೋಚನೆ ಮಾಡಬೇಡಿ. ಈ ರೀತಿ ಅಭಿಮಾನ ವ್ಯಕ್ತಪಡಿಸಬೇಕೆಂದು ಯಾರೂ ಇಷ್ಟ ಪಡುವುದಿಲ್ಲ' ಎಂದು ಬುದ್ದಿಮಾತು ಹೇಳಿದ್ದರು. ಬಳಿಕ ಜಿಮ್ಸ್ ಆಸ್ಪತ್ರೆಗೆ ತೆರಳಿ, ಗಾಯಾಳು ಯುವಕರ ಆರೋಗ್ಯ ವಿಚಾರಿಸಿದ್ದರು.
ಕುಟುಂಬಕ್ಕೆ ಸರ್ಕಾರದ ಪರಿಹಾರ: ಯುವಕರ ಮೃತಪಟ್ಟ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಸಿಎಂ ಸಿದ್ದರಾಮಯ್ಯ, ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ತಿಳಿಸಿದ್ದರು. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲ್ ಕೂಡ ಸಂತಾಪ ಸೂಚಿಸಿದ್ದರು.
ಇದನ್ನೂ ಓದಿ: ಬರ್ತ್ ಡೇ ಅಂದ್ರೆನೇ ಭಯ ಆಗ್ತಿದೆ, ಮೃತರ ಕುಟುಂಬಗಳಿಗೆ ಅಗತ್ಯ ಸಹಾಯ ಮಾಡುವೆ: ಯುವಕರ ಪೋಷಕರಿಗೆ ಯಶ್ ಸಾಂತ್ವನ