ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಪದೇ ಪದೇ ಉಂಟಾಗುತ್ತಿರುವ ಭೂ ಕುಸಿತ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ಕರೆಸಿಕೊಳ್ಳಲಾಗಿದೆ. ಅವರು ಎರಡು ದಿನಗಳ ಕಾಲ ನರಗುಂದ ಪಟ್ಟಣದಲ್ಲಿ ವಾಸ್ತವ್ಯ ಹೂಡಿ ಪರಿಶೀಲನೆ ಮಾಡಿ, ತನಿಖೆ ನಡೆಸಲಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶೇಷ ತಂಡವು ಎರಡು ದಿನಗಳ ಕಾಲ ನರಗುಂದ ಪಟ್ಟಣದಲ್ಲಿ ವಾಸ್ತವ್ಯ ಹೂಡಿ ಪರಿಶೀಲಿಸಲಿದೆ. ಪ್ರಕೃತಿ ವಿಕೋಪ ಕೇಂದ್ರದ ಅಧಿಕಾರಿ ಹೆಚ್.ಎಸ್.ಎಂ.ಪ್ರಕಾಶ ನೇತೃತ್ವದಲ್ಲಿ ತನಿಖೆ ನಡೆಯುತ್ತದೆ ಎಂದರು.
ಅಪಾರ ಪ್ರಮಾಣದಲ್ಲಿ ನೀರು ಬರುತ್ತದೆ. ಅದು ಎಲ್ಲಿಂದ ಬರುತ್ತಿದೆ? ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಕಳೆದ ಬಾರಿ ಬಂದ ತಂಡ ಇದನ್ನು ಕಂಡುಹಿಡಿಯುವಲ್ಲಿ ವಿಫಲವಾಯಿತು. ಆದರೆ ಈ ಬಾರಿ ಭೂ ಕುಸಿತಕ್ಕೆ ಸೂಕ್ತವಾದ ಪರಿಹಾರ ದೊರೆಯುತ್ತದೆ ಎಂಬ ನಂಬಿಕೆ ಇದೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.