ಗದಗ : ಮೊದಲೇ ರೈತರು ಅಕಾಲಿಕ ರಣಮಳೆಗೆ ತತ್ತರಿಸಿ ಹೋಗಿದ್ದು, ಲಕ್ಷಾಂತರ ರೂ. ಸಾಲ ಮಾಡಿ ಕೈಸುಟ್ಟುಕೊಂಡಿದ್ದಾರೆ. ಈ ನಡುವೆ ಕೆಲ ದುರಳರು ರೈತರಿಗೆ ಸರ್ಕಾರ ನೀಡುವ ಬೆಳೆ ವಿಮೆಯನ್ನು ಕಬಳಿಸಿದ್ದಾರೆ ಎನ್ನಲಾಗಿದೆ. ಇತ್ತ ಕೃಷಿ ಇಲಾಖೆಯ ಅಧಿಕಾರಿಗಳು ಸಹ ದುರುಳರಿಗೆ ಸಾಥ್ ನೀಡಿ ರೈತರಿಗೆ ಮೋಸ ಮಾಡ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗದಗದಲ್ಲಿ ರೈತರಿಗೆ ಬಂದ ಬೆಳೆವಿಮೆಯಲ್ಲಿ ಅಧಿಕಾರಿಗಳು ಕೆಲ ಖದೀಮರ ಜೊತೆ ಸೇರಿಕೊಂಡು ಭಾರಿ ಗೋಲ್ಮಾಲ್ ನಡೆಸಿದ್ದಾರೆ ಅನ್ನೋ ಆರೋಪಗಳು ಕೇಳಿ ಬಂದಿವೆ. ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಮತ್ತು ಡೋಣಿ ಗ್ರಾಮದಲ್ಲಿ ಕೆಲವು ರೈತರಿಗೆ ಸೇರಬೇಕಿದ್ದ ಬೆಳೆವಿಮೆ ಅನ್ಯರ ಪಾಲಾಗಿದೆ. ಜೊತೆಗೆ ಬೀಳು ಭೂಮಿಯ ಮೇಲೆಯೂ ಬೆಳೆ ಇದೆ ಅಂತ ಹಣ ಲಪಟಾಯಿಸಿದ್ದಾರೆ ಎನ್ನಲಾಗಿದೆ.
ಡೋಣಿ ಗ್ರಾಮದ ಬಸಯ್ಯ ಗ್ವಾಲಿಗೇರಿಮಠ ಎಂಬುವರಿಗೆ ಸೇರಿದ ಜಮೀನಿನ ಸರ್ವೇ ನಂಬರ್ 214/1 ರ 2020-21ನೇ ಸಾಲಿನ ಬೆಳೆವಿಮೆಯನ್ನ ಬೇರೆಯವರ ಹೆಸರಿಗೆ ಬರ್ತಿ ಮಾಡಲಾಗಿದೆ. ಈ ಬಗ್ಗೆ ರೈತ ಕೃಷಿ ಇಲಾಖೆಗೆ ದೂರು ನೀಡಿದ್ದಾನೆ. ನಂದಿವೇರಿ ಮಠಕ್ಕೆ ಸೇರಿದ ಜಮೀನನಲ್ಲಿ ಬೀಳುಭೂಮಿ ಇದ್ದರೂ ಫಸಲ್ ಭೀಮಾ ಯೋಜನೆಯ ಮೂಲಕ ಬೆಳೆವಿಮೆ ಪಡೆದಿದ್ದಾರೆ. ಅದು ಸಹ ಸ್ವಾಮೀಜಿಗಳಿಗೆ ಗೊತ್ತಿರಲಿಲ್ಲ.
ಡೋಣಿ, ಡಂಬಳ, ಕದಾಂಪುರ, ಗುಡ್ಡದ ಬೂದಿಹಾಳ, ಮುರಡಿ, ಚಿಕ್ಕವಡ್ಟಟ್ಟಿ ಹೀಗೆ ಈ ಭಾಗದ ಬಹುತೇಕ ಹಳ್ಳಿಗಳಲ್ಲಿ ರೈತರಿಗೆ ಮೋಸ ಆಗಿದೆ ಅಂತ ಅನ್ನದಾತರು ಆರೋಪಿಸಿದ್ದಾರೆ. ಈ ಕುರಿತು ರೈತರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ರೈತರ ಹೆಸರಲ್ಲಿ ಕೋಟ್ಯಂತರ ರೂ. ಗೋಲ್ಮಾಲ್ ನಡೆದಿದ್ದು, ಇದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನೊಂದೆಡೆ, ಗೋಲ್ಮಾಲ್ ಮಾಡಿದ ಖದೀಮರ ಜೊತೆಗೆ ಕೃಷಿ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಯಾಕೆಂದ್ರೆ ಇಷ್ಟೊಂದು ಅವ್ಯವಹಾರ ಅಧಿಕಾರಿಗಳಿಗೆ ಗೊತ್ತಿಲ್ಲದೇ ನಡೆಯೋದಿಲ್ಲ ಅನ್ನೋದು ರೈತರ ಆರೋಪ.