ಗದಗ: 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಗದಗ ಜಿಲ್ಲಾ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. ಹೆಚ್ಚುವರಿ ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶ ರಾಜೇಶ್ವರ ಶೆಟ್ಟಿ ತೀರ್ಪು ಪ್ರಕಟಿಸಿದರು. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಡ್ಡದ ಮಲ್ಲಾಪುರ ಗ್ರಾಮದ ಶಂಕರಗೌಡ ಶೇಖರಗೌಡ ಪಾಟೀಲ ಶಿಕ್ಷೆಗೊಳಗಾದ ವ್ಯಕ್ತಿ.
ಬಾಲಕಿ ಕುಡಿಯಲು ನೀರು ತರಲು ಹೋದಾಗ ಈತ ಜಮೀನಿಗೆ ಎಳೆದೊಯ್ದು ಅತ್ಯಾಚಾರ ಹಾಗೂ ಹಲ್ಲೆ ನಡೆಸಿದ್ದ. 2019ರಲ್ಲಿ ಪ್ರಕರಣ ನಡೆದಿದೆ. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐಪಿಸಿ ಸೆಕ್ಷನ್‌ಗಳು ಹಾಗು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಸರ್ಕಾರದ ಪರವಾಗಿ ವಕೀಲ ಅಮರೇಶ ಹಿರೇಮಠ ವಾದ ಮಂಡಿಸಿದ್ದಾರೆ.
ವಿಜಯಪುರದಲ್ಲೂ ಇಂತಹದ್ದೇ ಘಟನೆ: ಪತ್ನಿಯ ಅಪ್ರಾಪ್ತ ವಯಸ್ಸಿನ ಸಹೋದರಿ ಮೇಲೆ ಅತ್ಯಾಚಾರ ಎಸಗಿದವನಿಗೆ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 26,000 ರೂ. ದಂಡ ವಿಧಿಸಿ ಇಲ್ಲಿನ ನ್ಯಾಯಾಲಯ ಆದೇಶ ಹೊರಡಿಸಿದೆ. ಅಪರಾಧಿ ಟ್ಯಾಕ್ಸಿ ಚಾಲಕನಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದ. ಈತ 2020ರ ಮಾರ್ಚ್‌ನಲ್ಲಿ ಸಂಬಂಧಿಕರ ಮದುವೆಗೆಂದು ಪತ್ನಿಯೊಂದಿಗೆ ತಾಳಿಕೋಟೆಗೆ ಬಂದಿದ್ದ. ಕೊರೊನಾ ಸೋಂಕಿನಿಂದಾಗಿ ಬಸ್ ಸಂಚಾರ ತಡೆಯಲಾಗಿತ್ತು. ಬೆಂಗಳೂರಿಗೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ. ಈ ವೇಳೆ ಪತ್ನಿಯ ಇಬ್ಬರು ಸಹೋದರಿಯರಲ್ಲಿ ಒಬ್ಬಳನ್ನು ಅಪರಾಧಿ ಮನೆಯಲ್ಲಿ, ಇನ್ನೊಬ್ಬಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು.
2020 ಏಪ್ರಿಲ್ 18ರಂದು ಪತ್ನಿ ಮಾರ್ಕೆಟ್‌ಗೆ ಹೋದಾಗ ಅಪರಾಧಿ ಹಾಗೂ ಅಪ್ರಾಪ್ತೆ ಇಬ್ಬರೇ ಮನೆಯಲ್ಲಿ ಇದ್ದರು. ಈ ವೇಳೆ ಆಕೆಯ ಮೇಲೆ ಈತ ಅತ್ಯಾಚಾರ ಎಸಗಿದ್ದನು. ವಿಷಯವನ್ನು ಯಾರಿಗಾದರೂ ಹೇಳಿದರೆ ಅಕ್ಕ, ತಂದೆ, ತಾಯಿಯನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಸಿದ್ದನು. ಬಳಿಕ ಮತ್ತೆ ಅತ್ಯಾಚಾರಕ್ಕೆ ಯತ್ನಿಸಿದ್ದನು. ವಿಷಯ ಮನೆಯವರಿಗೆ ಗೊತ್ತಾಗಿ ಆತನ ವಿರುದ್ಧ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ವಿಜಯಪುರ ವಿಶೇಷ ನ್ಯಾಯಾಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಮಾಡಿತ್ತು.
ಇದನ್ನೂ ಓದಿ: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ: ತಾಯಿಯ ಮನವಿ ಮೇರೆಗೆ ಆರೋಪಿಗೆ ಜಾಮೀನು