ಗದಗ: ಅಹಾರ ಸಚಿವ ಉಮೇಶ ಕತ್ತಿ ಮತ್ತೆ ನಾಲಗೆ ಹರಿಬಿಟ್ಟಿದ್ದಾರೆ. ಪಡಿತರ ಅಕ್ಕಿಯನ್ನು ಕಡಿತಗೊಳಿಸಿರುವುದನ್ನು ಖಂಡಿಸಿ ಕರೆ ಮಾಡಿದ್ದ ತಾಲೂಕಿನ ರೈತ ಸಂಘದ ಕಾರ್ಯಕರ್ತ ಈಶ್ವರ ಆರ್ಯರ ಅವರಿಗೆ ಸಚಿವ ಉಮೇಶ ಕತ್ತಿ ಉಡಾಫೆ ಉತ್ತರ ನೀಡಿ, ದೌಲತ್ತು ಪ್ರದರ್ಶಿಸಿದ್ದಾರೆ.
ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ಈಶ್ವರ ಆರ್ಯರ ಎಂಬ ರೈತ ಕರೆ ಮಾಡಿದ್ದ ವೇಳೆ, ಲಾಕ್ಡೌನ್ ಸಮಯದಲ್ಲೂ ಅಕ್ಕಿ ಕಡಿಮೆ ಕೊಡುತ್ತಿದ್ದೀರಾ ನಾವೇನು ಸತ್ತು ಹೋಗಬೇಕಾ ಎಂದು ಪ್ರಶ್ನಿಸಿದ್ದಾರೆ. ಇತ್ತರ ಉತ್ತರ ನೀಡಿದ ಸಚಿವರು ಸತ್ತು ಹೋದರೆ ಒಳ್ಳೆಯದೆ. ಪದೇ ಪದೇ ಕರೆ ಮಾಡಬೇಡಿ ಎಂದು ಉಡಾಫೆ ಉತ್ತರ ನೀಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಅಕ್ಕಿ ಜತೆಗೆ ಜೋಳ ಕೊಡ್ತೀವಿ. ಲಾಕ್ಡೌನ್ ಸಂದರ್ಭದಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತೆ. ಮುಂದಿನ ತಿಂಗಳಿನಿಂದ ಅಕ್ಕಿ ಕೊಡಲಾಗುವುದು ಎಂದು ಉಮೇಶ್ ಕತ್ತಿ ಹೇಳಿದರು. ಲಾಕ್ಡೌನ್ ಇದೆ, ಅಲ್ಲಿಯವರೆಗೆ ಉಪವಾಸ ಸಾಯೋದಾ ಎಂದು ಈಶ್ವರ್ ಪ್ರಶ್ನಿಸಿದಕ್ಕೆ, ಸಾಯೋದು ಒಳ್ಳೆಯದು, ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದು ಅಹಂಕಾರದ ಮಾತುಗಳನ್ನಾಡಿದ್ದಾರೆ.
ಫೋನ್ ಮಾಡಬೇಡಿ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ. ಆಹಾರ ಸಚಿವ ಉಮೇಶ್ ಕತ್ತಿ ಜೊತೆ ರೈತ ಈಶ್ವರ ಆರ್ಯರ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು, ಕತ್ತಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಅನ್ನವಿಲ್ಲದೆ ಯಾರೂ ಸಾಯಬಾರದು : ಈಶ್ವರ ಎಂಬಾತ ನನಗೆ ಫೋನ್ ಮಾಡಿದ್ದು ನಿಜ. ಅಕ್ಕಿ ವಿತರಣೆ ಆಗುತ್ತದೆ ಎಂದು ಹೇಳಿದರೂ ಸಾಯುತ್ತೇನೆ ಎಂದ. ಸಾಯ್ತಿದ್ರೆ ಸಾಯಿ ಅಂದೆ. ಆದರೆ, ಅನ್ನವಿಲ್ಲದೆ ಯಾರೂ ಸಾಯಬಾರದು ಎಂದು ವೈರಲ್ ಆಗಿರುವ ತಮ್ಮ ಆಡಿಯೋ ಬಗ್ಗೆ ಸಚಿವ ಉಮೇಶ್ ಕತ್ತಿ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಮುಖ್ಯಮಂತ್ರಿಗಳು ನನ್ನ ಮೇಲೆ ವಿಶ್ವಾಸ ಇಟ್ಟು ಒಳ್ಳೆಯ ಖಾತೆ ನೀಡಿದ್ದಾರೆ. ಬಡವರ್ಗದ ಎಲ್ಲರಿಗೂ ಅನ್ನ ಕೊಡಿಸುವ ಜವಾಬ್ದಾರಿ ನನ್ನ ಮೇಲಿದೆ. ನಾನು ಆಡು ಭಾಷೆಯಲ್ಲಿ ಮಾತನಾಡಿದ್ದೇನೆ. ಅದನ್ನೇ ವಿವಾದ ಮಾಡಬಾರದು ಎಂದು ಮನವಿ ಮಾಡುತ್ತೇನೆ ಎಂದರು.