ಗದಗ: ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆಯಲ್ಲಿ ಮಡಿದವರಿಗೆ ಶಾಸಕ ಜಮೀರ್ ಅಹ್ಮದ್ ಪರಿಹಾರ ವಿತರಿಸಿರುವುದರ ವಿರುದ್ಧ ಸಚಿವ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ ಅವರಿಗೆ ಕೇವಲ ಜಾತಿ ಮಾಡುವುದು ಮಾತ್ರವೇ ಗೊತ್ತು. ಆದರೆ ಅವರಿಗೆ ಕಾನೂನು ಗೊತ್ತಿಲ್ಲ. ಕಿಡಿಗೇಡಿಗಳಿಗೆ ಪರಿಹಾರ ನೀಡಿ ಮತ್ತಷ್ಟು ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದರು.
ಒಬ್ಬ ರಾಜಕಾರಣಿಯಾಗಿ, ಶಾಸಕನಾಗಿ ಮಾಡುವ ಕರ್ತವ್ಯಕ್ಕೆ ಯಾವಾಗಲೂ ವಿಮುಖರಾಗಿ ನಡೆಯುವ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಕೋಮು ದ್ವೇಷ ಮೂಡಿಸುವ, ಜಾತಿ ಇಟ್ಕೊಂಡು ವಾದ ಮಾಡುವ ಕೆಲಸ ಇದೆ. ಜಮೀರ್ ಮಾಡುವ ಕೆಲಸ ಸಮಾಜಕ್ಕೆ ಮಾರಕವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೊತೆಗೆ ಬೆಂಗಳೂರಿನಲ್ಲಿ ಗಲಾಟೆ ಮಾಡಿದವರ ಮೇಲೆ ಕೇಸ್ ದಾಖಲು ಮಾಡಿ ಅರೆಸ್ಟ್ ಮಾಡಲಾಗುತ್ತದೆ. ಗಲಾಟೆಯಲ್ಲಿ ಯಾವ ಸಂಘಟನೆ ಹಾಗೂ ಯಾರ್ಯಾರ ಕೈವಾಡ ಇದೆ ಎನ್ನುವ ಕುರಿತು ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ಕಾನೂನು ಕೈಗೆ ಎತ್ತಿಕೊಂಡು ಆಸ್ತಿ-ಪಾಸ್ತಿ ಹಾನಿ ಮಾಡಿದವರಿಂದಲೇ ಅದರ ನಷ್ಟ ವಸೂಲಿ ಮಾಡಬೇಕು. ಆಸ್ತಿ-ಪಾಸ್ತಿ ಹಾನಿ ಮಾಡಿದವರಿಂದಲೇ ಅವರ ಆಸ್ತಿ ಮುಟ್ಟುಗೋಲು ಹಾಕಲು ಸರ್ಕಾರ ಚರ್ಚೆ ನಡೆಸುತ್ತಿದೆ ಎಂದರು.
ಇನ್ನು ಸಂಘಟನೆ ನಿಷೇಧ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಕಾನೂನು ಕೈಗೆ ತೆಗೆದುಕೊಂಡಿದ್ದನ್ನು ನಾನು ಖಂಡಿಸುತ್ತೇನೆ ಎಂದರು.