ಗದಗ: ಸರಿಯಾದ ವ್ಯವಸ್ಥೆಗಳಿಲ್ಲದೆ ಕೋವಿಡ್ ಕೇಂದ್ರದಲ್ಲಿ ದೇಶ ಕಾಯುವ ಯೋಧನ ಕುಟುಂಬವೊಂದು ಪರದಾಡುತ್ತಿರುವುದು ಬೆಳಕಿಗೆ ಬಂದಿದೆ.
ನರಗುಂದ ತಾಲೂಕಿನ ಬೆನಕೊಪ್ಪ ಗ್ರಾಮದ ಕೋವಿಡ್ ಕೇಂದ್ರ ಅವ್ಯವಸ್ಥೆಯ ಆಗರವಾಗಿದ್ದು. ಇಲ್ಲಿನ ದುಸ್ಥಿಯ ಕುರಿತು ಸೋಂಕಿತರು ಇತ್ತೀಚೆಗೆ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದೀಗ ಅದೇ ಕೋವಿಡ್ ಕೇಂದ್ರದಲ್ಲಿ ಕನಿಷ್ಠ ವ್ಯವಸ್ಥೆಗಳಿಲ್ಲದೆ ಯೋಧನ ಕುಟುಂಬಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಕೋವಿಡ್ ಕೇಂದ್ರದಲ್ಲಿ ಮಲಗಲು ಹಾಸಿಗೆ, ಕುಡಿಯುವ ನೀರು, ಸರಿಯಾದ ಶೌಚಾಲಯ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲ. ಹೀಗಾಗಿ, ಸೋಂಕಿತರು ನೆಲದಲ್ಲೇ ರಟ್ಟಿನ ತುಂಡುಗಳ ಮೇಲೆ ಮಲಗುವಂತ ಪರಿಸ್ಥಿತಿಯಿದೆ. ಕೋವಿಡ್ ಕೇಂದ್ರದ ಅವ್ಯವಸ್ಥೆ ಕುರಿತು ದೇಶದ ಗಡಿಯಲ್ಲಿ ಕರ್ತವ್ಯದಲ್ಲಿರುವ ಯೋಧನು ಇಲ್ಲಿನ ತಹಶೀಲ್ದಾರ್ ಮತ್ತು ವೈದ್ಯರ ಜೊತೆ ಕರೆ ಮಾಡಿ ಮಾತನಾಡಿದ್ದಾರೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ರೋಗಿಗಳು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.