ಗದಗ: ಲಾಕ್ಡೌನ್ ಘೋಷಣೆಯಾದಾಗಿನಿಂದ ಬೆಳೆ ಮಾರಾಟವಾಗದೆ ಸಾಕಷ್ಟು ರೈತರು ನಷ್ಟ ಅನುಭವಿಸಿದ್ದಾರೆ. ಬಹಳಷ್ಟು ರೈತರು ಚೆನ್ನಾಗಿ ಬೆಳೆ ಬಂದರೂ ಬೆಲೆ ಸಿಗಲಿಲ್ಲ ಅಂತ ಕಂಗಾಲಾಗಿದ್ದಾರೆ. ಅದರಲ್ಲೂ ಮಧ್ಯವರ್ತಿಗಳ ಹಾವಳಿಯಿಂದ ಹೈರಾಣಾಗಿದ್ದಾರೆ. ಆದರೆ ಇಲ್ಲೊಂದಿಷ್ಟು ರೈತರು ಮಧ್ಯವರ್ತಿಗಳಿಗೆ ಅವಕಾಶ ಕೊಡದೆ ತಾವು ಬೆಳೆದ ಬೆಳೆಯನ್ನ ತಾವೇ ಮಾರಿ ಲಕ್ಷಾಂತರ ರೂ. ಲಾಭ ಪಡೆಯುತ್ತಿದ್ದಾರೆ.
ಗದಗ ಜಿಲ್ಲೆಯ ಹುಲಕೋಟಿ ಗ್ರಾಮದಲ್ಲಿ ಮಾವು ಬೆಳೆಗಾರರ ಸಂಘವನ್ನು ರಚನೆ ಮಾಡಲಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ರೈತರು ಸೇರಿ ಈ ಸಂಘ ಮಾಡಿಕೊಂಡಿದ್ದಾರೆ. ತಮ್ಮ ಫಸಲನ್ನು ನೇರವಾಗಿ ಮಾರ್ಕೆಟ್ಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದಾರೆ.
ಜಿಲ್ಲೆಯ ಹುಲಕೋಟಿ, ಶ್ಯಾಗೋಟಿ, ದುಂದೂರ ಸೇರಿದಂತೆ ಹಲವು ಗ್ರಾಮದಲ್ಲಿ ಅತಿ ಹೆಚ್ಚು ಮಾವು ಬೆಳೆಯಲಾಗುತ್ತದೆ. ಸುಮಾರು 270 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಗದಗ, ಧಾರವಾಡ ಜಿಲ್ಲೆಯ ಸುಮಾರು 600ಕ್ಕೂ ಹೆಚ್ಚು ರೈತರು ಸೇರಿಕೊಂಡು ಇತರ ರೈತರಿಂದ ಮಾವನ್ನು ಖರೀದಿ ಮಾಡುತ್ತಾರೆ. ಬಳಿಕ ಹುಲಕೋಟಿಯಲ್ಲಿ ಮಾವು ಸಂಸ್ಕರಣೆ ಮಾಡಿ ತಾವೇ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮಧ್ಯವರ್ತಿಗಳ ಹಾವಳಿಯಿಲ್ಲದೇ ಸಂಪೂರ್ಣ ಆದಾಯ ರೈತನ ಕೈ ಸೇರುತ್ತಿದೆ.
ಹುಲಕೋಟಿ ಗ್ರಾಮದ ವಿಶ್ವನಾಥ ಹಿರೇಗೌಡ್ರು ಒಬ್ಬ ಪ್ರಗತಿಪರ ರೈತ. ಮೂಲತಃ ಇವರು ಆಟೋ ಮೊಬೈಲ್ ಎಂಜಿನಿಯರ್. ಆದರೆ ಆಗಿದ್ದು ಮಾತ್ರ ಪ್ರಗತಿಪರ ರೈತ. ಅವರದ್ದು ಕೃಷಿ ಕುಟುಂಬ ಆಗಿದ್ದರಿಂದ ಕೃಷಿಯತ್ತ ಒಲವು ತೋರಿಸಿದರು. ವೈಜ್ಞಾನಿಕವಾಗಿ ಮಾವು ಬೆಳೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಇದರಿಂದ ಪ್ರೇರಿತಗೊಂಡ ಹುಲಕೋಟಿಯ ಇತರೆ ಸಾಕಷ್ಟು ರೈತರು ಮಾವು ಬೆಳೆಯಲು ಶುರು ಮಾಡಿದರು. ಮೊದಲು ಮಧ್ಯವರ್ತಿಗಳ ಸಹಾಯದಿಂದ ಮಾವು ಮಾರಿ ಸಾಕಷ್ಟು ರೈತರು ಕೈ ಸುಟ್ಟುಗೊಂಡಿದ್ದರು. ಹೀಗಾಗಿ ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಮಾವು ಬೆಳೆಗಾರರ ಸಂಘ ಕಟ್ಟಿ ರೈತರಿಗೆ ಮತ್ತು ಗ್ರಾಹಕರ ನಡುವೆ ನೇರವಾಗಿ ವ್ಯವಹಾರ ಆಗುವಂತೆ ವ್ಯವಸ್ಥೆ ಕಲ್ಪಿಸಿದರು.
ಇದರ ಫಲವಾಗಿ ಲಾಕ್ಡೌನ್ ಮಧ್ಯದಲ್ಲಿಯೂ ಹುಲಕೋಟಿಯ ರೈತರು ಕೈ ತುಂಬ ಹಣ ಗಳಿಸುತ್ತಿದ್ದಾರೆ. ಗದಗ, ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ಅನೇಕ ನಗರಗಳಿಗೆ ನೇರವಾಗಿ ಹೋಗಿ ತಾವೇ ಮಾರಾಟ ಮಾಡುತ್ತಾರೆ. ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಂದ ಮಾವು ರಫ್ತು ಹಾಗೂ ಆಮದು ಮಾಡಿಕೊಳ್ಳಲು ಗ್ರೀನ್ ಪಾಸ್ ಪಡೆದುಕೊಂಡು ನೇರವಾಗಿ ಗ್ರಾಹಕರಿಗೆ ಯೋಗ್ಯ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರ ಜತೆಗೆ ಗ್ರಾಹಕರಿಗೂ ಲಾಭವಾಗುತ್ತಿದೆ. ಇವರ ಹೊಸ ಪ್ರಯೋಗ ಇತರೆ ರೈತರಿಗೆ ಮಾದರಿಯಾಗಿದೆ.